ನಾವು ಪಡೆದ ಶಿಕ್ಷಣದ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು:ಸಿಎಂ

ಮೈಸೂರು : ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿದವರು ಹಾಗೂ ಸಮಾಜದ ನೆರವು ಪಡೆದು ಉನ್ನತ ಸ್ಥಾನದಲ್ಲಿರುವವರು ಸಮಾಜದ ಋಣ ತೀರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನಗರದ ಕೆಎಸ್‌ಒಯು ವಿ.ವಿ ಘಟಿಕೋತ್ಸವ ಭವನದಲ್ಲಿ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಥಮ ವರ್ಷದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಡಿ.ದೇವರಾಜ ಅರಸು-ಎಲ್.ಜಿ.ಹಾವನೂರು ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಮಾತನಾಡಿದರು.

ಎಲ್.ಜಿ.ಹಾವನೂರು ಅವರು ತಮ್ಮ ವರದಿಯಲ್ಲಿ ಬಿಸಿಎಂ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ನಂತರ ಉದ್ಯೋಗ ಪಡೆದವರು ಅವರ ಆದಾಯದಲ್ಲಿ ಇಂತಿಷ್ಟು ಹಣವನ್ನು ದೇಣಿಗೆ ನೀಡಬೇಕು ಎಂದು ಹೇಳಿದ್ದನ್ನು ಪ್ರೊ.ರವಿವರ್ಮಕುಮಾರ್ ಪ್ರಸ್ತಾಪಿಸಿದ್ದಾರೆ. ಆದರೆ, ಇದನ್ನು ಎಲ್ಲರೂ ಪಾಲಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಶಿಕ್ಷಣ ಎಂಬುದು ಬಹಳ ಮುಖ್ಯ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.೧೨ ರಷ್ಟು ಮಂದಿ ಮಾತ್ರ ಶಿಕ್ಷಿತರಿದ್ದರು. ಈಗ ಶೇ.೭೮ ಮಂದಿ ಶಿಕ್ಷಿತರಿದ್ದಾರೆ. ನನ್ನ ಪ್ರಕಾರ ಸಮಾಜ ಸರಿದಾರಿಯಲ್ಲಿ ಸಾಗಬೇಕಾದಲ್ಲಿ ಶೇ.೧೦೦ ರಷ್ಟು ಶಿಕ್ಷಣ ಇರಬೇಕು ಎಂದು ತಿಳಿಸಿದರು.

ಕೇವಲ ನಾವುಗಳು ಶಿಕ್ಷಿತರಾದರೆ ಮಾತ್ರ ಸಾಲದು. ನಾವು ಪಡೆದ ಶಿಕ್ಷಣದ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಶಿಕ್ಷಣ ಪಡೆದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಸಿಎಂ ಹೇಳಿದರು.

ಎಲ್ಲಾ ಧರ್ಮಗಳು ಕೂಡ ಪ್ರೀತಿ, ಶಾಂತಿ, ಸಹಬಾಳ್ವೆಯನ್ನು ಭೋದಿಸುತ್ತವೆ. ನಾವುಗಳು ಅದರಂತೆ ನಡೆದುಕೊಳ್ಳಬೇಕು. ವಿದ್ಯಾವಂತರೇ ಜಾತಿ ವ್ಯವಸ್ಥೆಯನ್ನು ಪ್ರೋತ್ಸಹಿಸಿದಲ್ಲಿ, ಅನ್ಯರನ್ನು ದ್ವೇಷದಿಂದ ಕಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಸಮಾನತೆಯನ್ನು ತೊಡೆದುಹಾಕದಿದ್ದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಎಲ್ಲರೂ ಶಿಕ್ಷಣ ಪಡೆಯಬೇಕು. ಐಎಎಸ್, ಕೆಎಎಸ್ ಅಧಿಕಾರಿಗಳಾದಲ್ಲಿ ನಿಮಗೆ ಯಾವುದೇ ಜಾತಿಯವರು ಕೂಡ ಹೆಣ್ಣು ಕೊಡುತ್ತಾರೆ ಎಂದು ಹೇಳಿದರು.

ಯಾರೇ ಆಗಲಿ ಸ್ವಾಭಿಮಾನವನ್ನು ಬಿಟ್ಟು ಗುಲಾಮಗಿರಿಗೆ ಇಳಿಯಬಾರದು. ಮೇಲ್ವರ್ಗದ ಜನರನ್ನು ಕಂಡಲ್ಲಿ ಸ್ವಾಮಿ, ಬುದ್ದಿ ಎನ್ನುವುದು, ಸುಶಿಕ್ಷಿತ, ಶ್ರೀಮಂತ ದಲಿತ ವ್ಯಕ್ತಿಯನ್ನು ಏಕ ವಚನದಲ್ಲಿ ಮಾತನಾಡಿಸುವುದೇ ಗುಲಾಮಗಿರಿಯ ಸಂಕೇತ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕನ್ನಡಿಗರು ನಾವು ಕನ್ನಡದಲ್ಲಿಯೇ ಮಾತನಾಡುತ್ತೇನೆ, ಕನ್ನಡದಲ್ಲಿಯೇ ವ್ಯವಹರಿಸುತ್ತೇನೆ ಎಂದು ಶಪಥ ಮಾಡಿ. ನೀವು ಯಾವ ಭಾಷೆಯನು ಬೇಕಾದರೂ ಕಲಿಯಿರಿ. ಆದರೆ, ಕನ್ನಡವನ್ನು ಗೌರವಿಸಿ, ಪ್ರೀತಿಸಿ ಎಂದು ಸಿಎಂ ಕರೆ ನೀಡಿದರು.

ಶಾಸಕರಾದ ಡಿ.ರವಿಶಂಕರ್, ಕೆ.ಹರೀಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತರೆಡ್ಡಿ, ಡಾ.ಸೋಮ ಇಳಂಗೋವನ್, ಮುಕ್ತ ವಿವಿ ಕುಲಪತಿ ಶರಣಪ್ಪ ಹಲಸೆ, ರವಿಬೋಸ್ ರಾಜ್, ಸಂಘದ ಅಧ್ಯಕ್ಷ ಬಿ.ಶಿವಸ್ವಾಮಿ, ಗೌರವಾಧ್ಯಕ್ಷ ಎಂ.ರಾಮಪ್ಪ, ಉಪಾಧ್ಯಕ್ಷ ಆರ್.ಮಹದೇವ, ಕಾರ್ಯದರ್ಶಿ ಬಿ.ಪಿ.ರಾಜೇಶ್, ಖಜಾಂಚಿ ಕೆರುಕ್ಮಾಂಗದ, ಜಂಟಿ ಕಾರ್ಯದರ್ಶಿ ಜಿ.ಕೆ.ರಮೇಶ್ ಗೌಡ ಮುಂತಾದವರು ಭಾಗವಹಿಸಿದ್ದರು.