ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸ್ತಿಪಟುಗಳಿಗೆ ಬೆನ್ನು ತಟ್ಟುವ ಮೂಲಕ ಚಾಲನೆ ನೀಡಿದರು.
ನಗರದ ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ಆವರಣ ಶ್ರೀ ಡಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿರುವ ದಸರಾ ಕುಸ್ತಿ ಪಂದ್ಯಾವಳಿಯನ್ನು ಸಿದ್ದರಾಮಯ್ಯ ಅವರು ಖುಷಿಯಿಂದ ವೀಕ್ಷಿಸಿ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡಿದರು.
ಮೈಸೂರಿನ ಮಹದೇಪುರ ಪೈಲ್ವಾನ್ ವಿಕಾಸ್ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಕಿರಣ್ ನಡುವೆ ನಡೆದ 30 ನಿಮಿಷದ ಮೊದಲ ಕುಸ್ತಿಯು ಪೈಪೋಟಿಯಿಂದ ನಡೆಯಿತು. ಅಂತಿಮವಾಗಿ 22 ನಿಮಿಷದಲ್ಲಿ ಪೈಲ್ವಾನ್ ವಿಕಾಸ್ ಜಯಶೀಲರಾದರು.
ಮಹಿಳಾ ಕುಸ್ತಿ ಪಟುಗಳಾದ ಬೆಂಗಳೂರಿನ ಪುಷ್ಪ ಹಾಗೂ ಬೆಳಗಾವಿಯ ನಂದಿನಿ ನಡುವೆ ನಡೆದ ಕುಸ್ತಿಯಲ್ಲಿ 1 ನಿಮಿಷ 10 ಸೆಕೆಂಡ್ ನಲ್ಲಿ ನಂದಿನಿ ಜಯಗಳಿಸಿದರು.
ಅಥಣಿಯ ಪೈಲ್ವಾನ್ ಸುರೇಶ್ ಲಂಕೋಟಿ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಹನುಮಂಥ ವಿಠಲ ಬೇವಿನ ಮರ ನಡುವೆ ಕುಸ್ತಿ ರೋಚಕವಾಗಿತ್ತು.
ಪಂದ್ಯಾವಳಿಯನ್ನು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ರವಿಶಂಕರ್ ಡಿ, ಶ್ರೀವತ್ಸ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಗ್ಯಾರೆಂಟಿ ಯೋಜನೆ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪಾವತಿ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಮತ್ತಿತರರು ಸಿಎಂ ಜೊತೆ ವೀಕ್ಷಿಸಿದರು.
