ಮೈಸೂರು: ಮೈಸೂರು ದಸರಾ ಅತ್ಯಂತ ಜನಪ್ರಿಯವಾದದ್ದು, ನಾವೆಲ್ಲ ಚಿಕ್ಕಂದಿನಿಂದಲೂ ದಸರಾ ನೋಡಿಕೊಂಡೇ ಬೆಳೆದವರೂ ಎಂದು ಸಚಿವಕೆ. ವೆಂಕಟೇಶ್ ನುಡಿದರು.
ನಮ್ಮ ನಾಡ ಹಬ್ಬ ದಸರಾ ಕೇವಲ ಜಿಲ್ಲೆಗಳಿಗೆ ರಾಜ್ಯಕ್ಕೆ ಸೀಮಿತವಲ್ಲ, ದೇಶ ವಿದೇಶಗಳಿಗೂ ಜನಪ್ರಿಯವಾದ ಹಬ್ಬವಾಗಿದೆ ಎಂದು ಹೇಳಿದರು.
ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು,ಈ ನಾಡ ಹಬ್ಬವನ್ನು ಲಕ್ಷಾಂತರ ಜನ ಸಂತಸದಿಂದ ಕಣ್ ತುಂಬಿಕೊಳ್ಳುತ್ತಾರೆ. ಹಾಗೆ ಯುವ ಸಂಭ್ರಮವು ಕೂಡ ಒಂದು ಎಂದು ಬಣ್ಣಿಸಿದರು.
ಇದು ಯುವ ಪೀಳಿಗೆಗಳಿಗೆ ಅತ್ಯಂತ ಪ್ರಿಯವಾದ ಹಬ್ಬವಾಗಿದೆ ನಾಡಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಿಂದ ಕಾಲೇಜು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಶಾಸಕ ಜಿ.ಟಿ ದೇವೇಗೌಡ ಅವರು ಮಾತನಾಡಿ ಯುವಕರ ಸಂಭ್ರಮ ಎಂದೇ ಹೇಳಲಾಗುವ ಯುವ ಸಂಭ್ರಮವು ದಸರಾ ಮಹೋತ್ಸವದ ಮೊದಲ ಅದ್ದೂರಿ ಕಾರ್ಯಕ್ರಮವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ದಸರಾ ಮಹೋತ್ಸವದ ಮೊದಲನೇ ಕಾರ್ಯಕ್ರಮವಾದ ಯುವಸಂಭ್ರಮ ಕಾರ್ಯಕ್ರಮವನ್ನು ವಿಜೃಂಭಣೆಯಾಗಿ ಮಾಡಲು ಸರ್ಕಾರ ಕಾರಣ, ಅತಿ ಹೆಚ್ಚು ಅನುದಾನ ನೀಡಿ ಯುವಸಂಭ್ರಮ ಅವಿಸ್ಮರಣೀಯವಾಗುವಂತ ಕಾರ್ಯಕ್ರಮಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ತನ್ವೀರ್ ಸೆಟ್ ಅವರು ಮಾತನಾಡಿ ಯುವಸಂಭ್ರಮದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳು ನಡೆಯಲಿವೆ, ಅರ್ಥಪೂರ್ಣ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ನೋಡಬೇಕು. ಕಾರ್ಯಕ್ರಮ ನೀಡಲು ಬಂದಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರಲ್ಲಿ ಇನ್ನು ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ಹೇಳಿದರು.
ಎಲ್ಲಾ ಯುವ ಪೀಳಿಗೆಗಳು ಅರಿತುಕೊಂಡು ಎಲ್ಲರಿಗೂ ಸಮಾನತೆಯನ್ನು ತಂದುಕೊಟ್ಟಿರುವ ಸಂವಿಧಾನದ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಬ್ರಾತೃತ್ವವನ್ನು ಬೆಳೆಸಬೇಕು ಎಂದು ಹೇಳಿದರು.
ಎಕ್ಕ ಸಿನಿಮಾ ಖ್ಯಾತಿಯ ಯುವ ರಾಜ್ ಕುಮಾರ್ ಮಾತನಾಡಿ ತುಂಬಾ ಖುಷಿ ಆಗುತ್ತಿದೆ. ದಸರಾ ಅಂದರೆ ಎನರ್ಜಿ. ಅರಮನೆ, ರಾಜರು, ಕುವೆಂಪು ನೆನಪಾಗುತ್ತಾರೆ ಎಂದು ತಿಳಿಸಿದರು. ಬ್ಯಾಂಗಲ್ ಬಂಗಾರಿ ಗೀತೆಗೆ ನೃತ್ಯ ಮಾಡಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರು.
ಅಮೃತ ಅಯ್ಯಂಗಾರ್ ಅವರು ಮಾತನಾಡಿ, ನಮ್ಮೂರಲ್ಲಿ ನಮ್ಮ ವೇದಿಕೆಯಲ್ಲಿ ನಿಂತು ಮಾತನಾಡಲು ಖುಷಿ ಆಗುತ್ತೆ. ಇದೇ ವೇದಿಕೆಯಲ್ಲಿ ನಾನು ನೃತ್ಯ ಮಾಡಿದ್ದೇನೆ. ಮೈಸೂರಿಗೆ ಬರಲು ಖುಷಿ ಆಗುತ್ತೆ. ದಸರಾಗೆ ಕಿಕ್ ಸ್ಟಾರ್ಟ್ ಕೊಡೊದು ಯುವ ಸಂಭ್ರಮ ಇದನ್ನ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಬಳಿಕ ಮೊದಲ ದಿನ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು ನಡೆದವು.
ಕಾರ್ಯಕ್ರಮ ದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಡಾ ಪುಷ್ಪಾ ಅಮರ್ ನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್ ಮತ್ತಿತರರು ಉಪಸ್ಥಿತರಿದ್ದರು.