ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಅರೆಸ್ಟ್

ನವದೆಹಲಿ: ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು
ಬಂಧಿಸಲಾಗಿದೆ.

ವೀರೇಂದ್ರ ಅವರನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಶುಕ್ರವಾರ ಹಲವು ರಾಜ್ಯಗಳಲ್ಲಿ ನಡೆಸಿದ ದಾಳಿಯ ನಂತರ 12 ಕೋಟಿ ರೂ, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶುಕ್ರವಾರ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಇಡಿ ತಿಳಿಸಿದೆ.

ಶಾಸಕರು ತಮ್ಮ ಸಹಚರರೊಂದಿಗೆ ಕ್ಯಾಸಿನೊವನ್ನು ಗುತ್ತಿಗೆ ಪಡೆಯುವ ಸಲುವಾಗಿ ಮಾತುಕತೆ ನಡೆಸಲು ಗ್ಯಾಂಗ್ಟಾಕ್‌ಗೆ ಭೇಟಿ ನೀಡಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.

‘ವೀರೇಂದ್ರ ಅವರ ಸಹೋದರ ಕೆ.ಸಿ ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್ ರಾಜ್ ಅವರ ನಿವಾಸದಿಂದ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಸಹೋದರ ಕೆ.ಸಿ ತಿಪ್ಪೇಸ್ವಾಮಿ ಮತ್ತು ಅವರ ಇತರ ಸಹಚರರು ದುಬೈನಿಂದ ಆನ್‌ಲೈನ್ ಗೇಮಿಂಗ್ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಇ.ಡಿ ತಿಳಿಸಿದೆ.

ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ ಮತ್ತು ಬಿಗ್ ಡ್ಯಾಡಿ ಕ್ಯಾಸಿನೊ ಎಂಬ ಹೆಸರಿನ ಗೋವಾದ ಐದು ಕ್ಯಾಸಿನೊಗಳ ಮೇಲೆಯೂ ದಾಳಿ ನಡೆಸಲಾಗಿದೆ.