ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ದುನಿಯಾ ವಿಜಯ್‌ ಎರಡನೇ ಪುತ್ರಿ ಮೋನೀಷಾ

ಬೆಂಗಳೂರು: ನಟ ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾಗೆ ವಿಜಯ್ ಅವರ ಎರಡನೇ ಮಗಳು ಮೋನಿಷಾ ನಾಯಕಿಯಾಗುವ ಮೂಲಕ
ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ತಂದೆಯ ಸಿನಿಮಾ ಮೂಲಕವೇ ಮೋನಿಷಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ವಿಶೇಷ, ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ಈಗಾಗಲೇ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದು,ಈಗ ಎರಡನೇ ಮಗಳು ಮೋನಿಷಾ ಕೂಡ ಬೆಳ್ಳಿತೆರೆಗೆ ಪ್ರವೇಶಿಸಿದ್ದಾರೆ.

ಮೋನಿಷಾ ನಟನೆಯ ಮೊದಲ ಸಿನಿಮಾ ಹಾಗೂ ದುನಿಯಾ ವಿಜಯ್‌ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾದ ಹೆಸರನ್ನು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಹಿರಂಗ ಪಡಿಸಲಾಗಿದೆ.

ಮೋನಿಷಾ ಅವರ ಮೊದಲ ಚಿತ್ರಕ್ಕೆ ‘ಸಿಟಿ ಲೈಟ್ಸ್’ ಎಂದು ಹೆಸರಿಡಲಾಗಿದ್ದು, ಜವಾಬ್ದಾರಿ ದೀಪಗಳು ಎಂಬ ಟ್ಯಾಗ್‌ ಲೈನ್‌ ನೀಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಸಿನಿಮಾದ ಸಂತಸವನ್ನು ಹಂಚಿಕೊಂಡಿರುವ ಮೋನಿಷಾ, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಶುಭದಿನದಂದು ನಿಮ್ಮೊಂದಿಗೆ ನನ್ನ ಮೊದಲನೆಯ ಚಿತ್ರ ‘ಸಿಟಿ ಲೈಟ್ಸ್’ ನ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ಇಂತಹ ಅದ್ಭುತ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.