ಚಾಮರಾಜನಗರ: ಜಿಲ್ಲೆಯ ಯಾವ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಂತಹ ಕಡೆ ಪರ್ಯಾಯ ವ್ಯವಸ್ಥೆಗಳ ಮೂಲಕ ನೀರು ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವು, ಮಳೆ, ಬೆಳೆ, ಪ್ರಕೃತಿ ವಿಕೋಪ ಮತ್ತಿತರ ವಿಷಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು.
ಕುಡಿಯುವ ನೀರಿನ ಅಭಾವ ಇರುವ ಗ್ರಾಮ ಗಳಿಗೆ ಲಭ್ಯವಿರುವ ನೀರಿನ ಮೂಲಗಳಿಂದ ನೀರು ಸರಬರಾಜು ಮಾಡಬೇಕು, ಹೆಚ್ಚು ಹಣ ವೆಚ್ಚವಾದರೂ ಪರವಾಗಿಲ್ಲ. ಜನರಿಗೆ ನೀರು ಪೂರೈಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ನೀರಿನ ತೊಂದರೆ ಪರಿಹರಿಸುವ ಸಂಬಂಧ ಸಭೆ ನಡೆಸಿ ಅಧಿಕಾರಿಗಳ ಅಭಿಪ್ರಾಯಗಳನ್ನು ಪಡೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಪ್ರಗತಿ ಕುರಿತು ಪರಿಶೀಲಿಸಿದ ಸಚಿವರು ತ್ವರಿತವಾಗಿ ಯೋಜನೆ ಪೂರ್ಣಗೊಳಿಸಬೇಕು. ಹನೂರು ಭಾಗದಲ್ಲಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಇರುವ ತೊಡಕುಗಳನ್ನು ಪರಿಹರಿಸಿಕೊಳ್ಳಬೇಕು,ಉನ್ನತ ಹಂತದಲ್ಲಿ ಸಮಸ್ಯೆ ಇತ್ಯರ್ಥವಾಗಬೇಕಿದ್ದಲ್ಲಿ ಅದರ ಪೂರ್ಣ ಮಾಹಿತಿ ಕುರಿತ ವರದಿಯನ್ನು ಸಲ್ಲಿಸಿದರೆ ಮೇಲ್ಮಟ್ಟದಲ್ಲಿ ತಾವು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಜಾನುವಾರುಗಳಿಗೆ ಕಂಡುಬಂದಿರುವ ಚರ್ಮಗಂಟು ಖಾಯಿಲೆ ಪ್ರಕರಣಗಳ ಬಗ್ಗೆ ವಿವರ ಪಡೆದ ಸಚಿವರು ರೋಗ ಹರಡದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾನುವಾರು ಸಾಕುವವರಿಗೆ ಸಲಹೆ ನೀಡಬೇಕು, ಇಲಾಖೆಯ ಹಿರಿಯ ಅಧಿಕಾರಿಗಳು ನಿರಂತರವಾಗಿ ಮೇಲುಸ್ತುವಾರಿ ಮಾಡುವಂತೆ ವೆಂಕಟೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಚಾಮರಾಜನಗರ ತಾಲೂಕಿನ ಪುಣಜನೂರು, ಪುಣಜನೂರು ಗೇಟ್, ಕೋಳಿಪಾಳ್ಯ, ದೊಡ್ಡಮೂಡಹಳ್ಳಿ, ದೊಡ್ಡಮೋಳೆ, ಮೂಕನಪಾಳ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಮಾತನಾಡಿ ಹನೂರು ತಾಲೂಕಿನ 48 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, 52 ಕೊಳವೆಬಾವಿಗಳನ್ನು ಕೊರೆಯಿಸಬೇಕಾಗಿದೆ. ಕುಡಿಯುವ ನೀರಿನ ತೊಂದರೆ ಇನ್ನಷ್ಟು ಉಲ್ಬಣವಾಗದಂತೆ ಕೂಡಲೇ ಪರಿಹಾರ ಕಂಡುಕೊಂಡು ಜನರಿಗೆ ನೀರು ಪೂರೈಸಬೇಕಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಮಾತನಾಡಿ ಹನೂರು ಭಾಗದ ಹಲವೆಡೆ ಕುಡಿಯುವ ನೀರಿನ ಸಮಸ್ಯೆಗೆ ಅಂತರ್ಜಲ ಕುಸಿತ ಕಾರಣ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಗ್ರಾಮಿಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜಗದೀಶ್, ಪಶುಪಾಲನಾ ಇಲಾಖೆಯ ಜಾನುವಾರು ಆರೋಗ್ಯ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಡಾ. ಶಿವರುದ್ರಪ್ಪ, ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಶಿವಣ್ಣ, ಉಪನಿರ್ದೇಶಕರಾದ ಡಾ. ಮಂಜುನಾಥ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.