ಕೊಳ್ಳೇಗಾಲ: ಕಳೆದ ವರ್ಷಗಳಿಂದ ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ರಾಮನಗರ ಜಿಲ್ಲಾಸ್ಪತ್ರೆಗೆ ವರ್ಗಾವಣೆ ಗೊಂಡ ಡಾ.ರಾಜಶೇಖರ್ ಹಾಗೂ ಮೂವರು ಸಿಬ್ಬಂದಿಗೆ ಆಸ್ಪತ್ರೆಯ ಸಿಬ್ಬಂದಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಡಾ. ರಾಜಶೇಖರ್ ಅವರೂ ಭಾವುಕರಾಗಿ ಮಾತನಾಡಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 10 ವರ್ಷ 8 ತಿಂಗಳು ಸುಧೀರ್ಘ ಸೇವೆ ಸಲ್ಲಿಸಿದ ನಾನು 2015 ರ ಜುಲೈ 7 ರಲ್ಲಿ ವರ್ಗಾವಣೆಯಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಬಂದು ಇಲ್ಲಿಯೂ ಸಹ 9 ವರ್ಷ 10 ತಿಂಗಳ ಕಾಲ ವೈದ್ಯನಾಗಿ ಆಡಳಿತ ಅಧಿಕಾರಿಯಾಗಿ ತೃಪ್ತಿಕರವಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ನಾನು ಇಲ್ಲಿನ ಸಿದ್ದಯ್ಯನಪುರ ಗ್ರಾಮದವನು. ಸ್ವಂತ ಊರಿನಲ್ಲಿ ಕೆಲಸ ಮಾಡುವುದು ಕಷ್ಟಕರ ಏಕೆಂದರೆ ಸಂಬಂಧಿಕರು ಸ್ನೇಹಿತರು ಸ್ಥಳೀಯರು ಎಲ್ಲರೂ ನಮ್ಮನ್ನು ಗಮನಿಸುತ್ತಿರುತ್ತಾರೆ. ಆದರೂ ನನ್ನ ಅವಧಿಯಲ್ಲಿ ಯಾವುದಕ್ಕೂ ಯಾರಿಗೂ ಚ್ಯುತಿ ಬಾರದ ಹಾಗೆ ಕೆಲಸ ಮಾಡಿದ್ದೇನೆ ನಾನು ಇಲ್ಲಿ ಉತ್ತಮ ವಾಗಿ ಕೆಲಸ ಮಾಡಲು ಪ್ರೇರಣೆ ನನ್ನ ಕುಟುಂಬ ವರ್ಗ ಎಂದು ಹೇಳಿದರು.
ಯಾವುದೇ ಆಡಳಿತ ಮಾಡಲು ಕೆಲವರನ್ನು ನೆನಪಿಸಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಇಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ್ ಕುಮಾರ್ ಅವರು ಮೃತಪಟ್ಟ ನಂತರ ಅಂದಿನ ಶಾಸಕರಾಗಿದ್ದ ಎನ್ ಮಹೇಶ್ ಅವರು ನನಗೆ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗುವ ಅವಕಾಶ ನೀಡಿದರು. ಅದೇ ರೀತಿ ಹಾಲಿ ಶಾಸಕ ಎ. ಕೃಷ್ಣಮೂರ್ತಿ ಅವರು ನನಗೆ ಸಹಕಾರ ನೀಡಿದರು. ಹಾಗಾಗಿ ನನ್ನ ಅವಧಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಿದೆ. ಇಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಮೀರಿಸುವಷ್ಟು ಸುಮಾರು 70 ರೋಗಿಗಳಿಗೆ ಡಯಲಿಸಿಸ್ ಮಾಡಲಾಗುತ್ತಿದೆ. ಆಸ್ಪತ್ರೆಯ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಆಸ್ಪತ್ರೆಯ ಸೇವೆಯನ್ನು ಮನಗೊಂಡ ಸರ್ಕಾರ ಈ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ ದರ್ಜೆಗೇರಿಸಿದೆ. ಆಸ್ಪತ್ರೆಗೆ ಕೋವಿಡ್ ಗೂ ಮೊದಲು ಬರುತ್ತಿದ್ದ ಶೇಕಡ 70ರಷ್ಟು ಔಷಧಿಗಳು ಕಡಿಮೆಯಾಗಿದೆ, ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ ಯಾರೇ ಬಂದರೂ ಉತ್ತಮ ಸೇವೆ ನೀಡಿ ಎಂದು ಸಿಬ್ಬಂದಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಿಂದ ವರ್ಗಾವಣೆಗೊಂಡ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಅವರಿಗೆ ಶಾಲು, ಹಾರ ಹಾಕಿ ಉಡುಗೊರೆ ನೀಡುವ ಮೂಲಕ ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಡಲಾಯಿತು.
ಜೊತೆಗೆ ಆಸ್ಪತ್ರೆಯಿಂದ ತಲಕಾಡು ಆಸ್ಪತ್ರೆಗೆ ವರ್ಗಾವಣೆಯಾದ ನರ್ಸ್ ರೂಪಶಾಲಿನಿ, ಚಾ.ನಗರ ಆಸ್ಪತ್ರೆಗೆ ವರ್ಗವಾದ ನಿಂಗಮ್ಮ, ಮೈಸೂರು ಜಯಲಕ್ಷ್ಮೀ ಆಸ್ಪತ್ರೆಗೆ ವರ್ಗವಾದ ಗ್ರೂಪ್ ಡಿ ಸಿದ್ದಮ್ಮ ಅವರನ್ನೂ ಸನ್ಮಾನಿಸಿ ಅಭಿನಂದಿಸಲಾಯುತು.
ಇಲ್ಲಿಗೆ ಬೇರೆ ಕಡೆಯಿಂದ ವರ್ಗವಾಗಿ ಆಗಮಿಸಿದ್ದ ನರ್ಸ್ ಗಳಾದ ಬೆನಿಟ, ಶೃತಿ, ದಿವ್ಯಶ್ರೀ ಹಾಗೂ ಹೇಮಾವತಿ ಅವರಿಗೆ ಹೂ ನೀಡುವ ಮೂಲಕ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಡಾ.ಕೆ.ಎಲ್.ಲೋಕೇಶ್ವರಿ, ಡಾ.ಎನ್.ಬಸವರಾಜು, ಡಾ.ಕೆ.ಬಿ.ಎನ್. ರಾಜು, ಡಾ.ಸುನಿತಾ, ಡಾ.ಟೀನಾ, ಡಾ.ಚೇತನ್, ಡಾ.ದಿಲೀಪ್, ಡಾ. ಕಾವ್ಯ ತಿಮ್ಮಯ್ಯ, ಡಾ.ಶೇಖರಾಜು, ಡಾ.ರಮೇಶ್ ಡಾ.ಶೃತಿ, ಡಾ.ಸುನೀತಾ, ನಿವೃತ್ತ ವೈದ್ಯಾಧಿಕಾರಿ ಡಾ.ರವಿಂದ್ರ, ಶುಶೂಷಕ ಸಿಬ್ಬಂದಿ ವರ್ಗ ಹಾಜರಿದ್ದರು.