ಮೈಸೂರು: ಡಾ ರಾಜ್ ಕುಮಾರ್ ವೃತ್ತದಲ್ಲಿ (ಫೌಂಟೇನ್ ಸರ್ಕಲ್) ಡಾ. ರಾಜ್ ಕುಮಾರ್ ಹೆಸರಿನ ನಾಮ ಫಲಕ ಕಾಣೆಯಾಗಿದ್ದು ಮತ್ತೆ ಅಳವಡಿಸಬೇಕೆಂದು ಕರ್ನಾಟಕ ಸೇನಾ ಪಡೆ ಒತ್ತಾಯಿಸಿದೆ.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮತ್ತು ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ನೇತೃತ್ವದ ನಿಯೋಗ ನಗರ ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ತೇಜೇಶ್ ಲೋಕೇಶ್ ಗೌಡ,ಮೈಸೂರಿನ ಮಹಾನಗರ ಪಾಲಿಕೆಯು ಈ ಹಿಂದೆ ಫೌಂಟೇನ್ ಸರ್ಕಲ್ ಎಂದು ಹೇಳಲಾಗುತ್ತಿದ್ದ ಬೆಂಗಳೂರಿನ ರಸ್ತೆಯ ಮೂಲಕ ಹಾದು ಬರುವಾಗ ಎದುರಾಗುವ 5 ರಸ್ತೆಗಳನ್ನು ಕೂಡುವ ಈ ಬೃಹತ್ ವೃತ್ತಕ್ಕೆ ಪದ್ಮಭೂಷಣ, ದಾದಾ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್ ಕುಮಾರ್ ಹೆಸರನ್ನಿಡುವ ನಿರ್ಣಯ ಕೈಗೊಂಡಿತ್ತು.ಜತೆಗೆ ವೃತ್ತದ ಒಂದು ಭಾಗದಲ್ಲಿ ಡಾ. ರಾಜ್ ಕುಮಾರ್ ವೃತ್ತ ಎಂದು ನಾಮಫಲಕ ಅಳವಡಿಸಿತ್ತು ಎಂದು ಹೇಳಿದರು.

ಆದರೆ ಪ್ರಾರಂಭದಿಂದಲೂ ಡಾ. ರಾಜ್ ಕುಮಾರ್ ವೃತ್ತ ಎಂದು ನೆಪಮಾತ್ರಕ್ಕೆ ವೃತ್ತದ ಮೂಲೆಯೊಂದರಲ್ಲಿ ನಾಮ ಫಲಕ
ಹಾಕಿದ್ದರಿಂದ ಇದು ಡಾ. ರಾಜ್ ಕುಮಾರ್ ವೃತ್ತ ಎಂದು ಹೆಚ್ಚು ಜನಪ್ರಿಯವಾಗಲಿಲ್ಲ.
ದುರುದ್ದೇಶದಿಂದ ನಗರಪಾಲಿಕೆ ಈ ಉಪೇಕ್ಷೆ ಅನುಸರಿಸಿತು. ಆದರೆ ಸಂಚಾರಿ ವಿಭಾಗದ ಸಹಾಯಕ ಪೋಲೀಸ್ ಆಯುಕ್ತರಾಗಿದ್ದ ಸಂದೇಶ್ ಅವರ ಅವಧಿಯಲ್ಲಿ ಪೋಲೀಸ್ ಇಲಾಖೆ ಇದನ್ನು ಡಾ. ರಾಜ್ ಕುಮಾರ್ ವೃತ್ತ ಎಂದು ಬಳಸುತ್ತಿತ್ತು.
ಹೆಸರಿಗಷ್ಟೇ ಮೂಲೆಯಲ್ಲಿದ್ದ ಈ ನಾಮ ಫಲಕವನ್ನು ಇತ್ತೀಚೆಗೆ ಕಿತ್ತೆಸೆದು ಅಲ್ಲಿ ಬಸ್ ತಂಗುದಾಣ ನಿರ್ಮಿಸಲಾಗುತ್ತಿದೆ. ಇದು ಡಾ. ರಾಜ್ ಅವರಿಗೆ ಹಾಗೂ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ.ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ತಿಳಿಸಿದರು.
ರಾಜ್ ಎಂದರೆ ಕನ್ನಡ, ಕನ್ನಡ ಎಂದರೆ ರಾಜ್ ಎಂಬ ಭಾವ 7 ಕೋಟಿ ಕನ್ನಡಿಗರಲ್ಲಿ ಮನೆಮಾಡಿದೆ, ಕನ್ನಡ ನಾಡು-ನುಡಿ, ಜನರ ಭಾವನೆಯ ರಾಯಭಾರಿ ಡಾ ರಾಜ್. ಆದರೆ ಮೈಸೂರು ನಗರ ಪಾಲಿಕೆ ಇದನ್ನು ಅರ್ಥ ಮಾಡಿಕೊಳ್ಳದೇ ದುರುದ್ದೇಶಪೂರ್ವಕವಾಗಿ ವೃತ್ತದಲ್ಲಿ ಡಾ.ರಾಜ್ ಕುಮಾರ್ ಅವರ ಹೆಸರನ್ನು ಇಲ್ಲದಂತಾಗಿಸಿ, ಆ ವೃತ್ತಕ್ಕೆ ಮತ್ತೊಬ್ಬರ ಹೆಸರನ್ನು ಇಡುವ ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೂಡಲೇ ವೃತ್ತವನ್ನು ಸೇರುವ ಎಲ್ಲಾ ರಸ್ತೆಗಳಲ್ಲಿ ಬರುವ ಜನರಿಗೆ ಗಮನ ಸೆಳೆಯುವಂತೆ ಡಾ. ರಾಜ್ಕುಮಾರ್ ವೃತ್ತ ಎಂದು ಒಂದು ವಾರದಲ್ಲಿ ಫಲಕ ಅಳವಡಿಸಬೇಕು.ಇಲ್ಲದಿದ್ದರೆ ನಮ್ಮ ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರು ಮಹಾ ನಗರ ಪಾಲಿಕೆ ಮುಂಭಾಗ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿಯೋಗದಲ್ಲಿ ಗೋಲ್ಡನ್ ಸುರೇಶ್, ಪ್ರಭುಶಂಕರ್, ಬೋಗಾದಿ ಸಿದ್ದೇಗೌಡ , ಕೃಷ್ಣಪ್ಪ, ರಾಧಕೃಷ್ಣ, ಹನುಮಂತಯ್ಯ, ರಘು ಅರಸ್, ದರ್ಶನ್ ಗೌಡ ಹಾಜರಿದ್ದರು.
