ಸರಳತನದಿಂದಲೇ ಬಹಳ ಮೇಲೆ ಬಂದವರು ಡಾ.ರಾಜ್:ಎಸ್ ಜೈ ಪ್ರಕಾಶ್

Spread the love

ಮೈಸೂರು:‌ ರಾಜಕುಮಾರ್ ಅವರು ತಮ್ಮ ಸರಳತನದಿಂದಲೇ ಬಹಳ ಮೇಲೆ ಬಂದಂತವರು ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರಾದ ಎಸ್ ಜೈ ಪ್ರಕಾಶ್ ಬಣ್ಣಿಸಿದರು.

ಅತ್ಯದ್ಭುತ ನಟ, ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜಕುಮಾರ್ ಅವರ 97ನೇ ಹುಟ್ಟುಹಬ್ಬದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು‌

ಕನ್ನಡ ಭಾಷೆಯಲ್ಲದೆ ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸದೆ ಕನ್ನಡಕ್ಕಾಗಿ ಬಹಳ ಸೇವೆಯನ್ನು ಮಾಡಿದವರು, ಗೋಕಾಕ್ ಚಳವಳಿಯಲ್ಲಿ ಮಹತ್ತರ ಪಾತ್ರ ವಹಿಸಿದವರು, ಅವರ ತತ್ವ ಆದರ್ಶ ಸರಳತೆಯನ್ನು ಈಗಿನ ನಟರೆಲ್ಲ ಅಳವಡಿಸಿಕೊಳ್ಳಬೇಕು ಎಂದು ಎಸ್ ಜೈ ಪ್ರಕಾಶ್ ಸಲಹೆ ನೀಡಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ಡಾ. ರಾಜಕುಮಾರ್ ಅವರು ಒಂದು ವ್ಯಕ್ತಿಯಲ್ಲ ಅವರೊಂದು ಶಕ್ತಿ ಎಂದು ಹೇಳಿದರು.

ತಮ್ಮ ಚಲನಚಿತ್ರಗಳಿಂದಲೇ ಸಮಾಜಕ್ಕೆ ಸಂದೇಶವನ್ನು ಕೊಡುತ್ತಿದ್ದವರು. ಇಡೀ ಭಾರತ ಚಿತ್ರರಂಗದಲ್ಲಿಯೇ ಅವರಂತಹ ಅತ್ಯದ್ಭುತ ನಟ ಇನ್ನೊಬ್ಬರಿಲ್ಲ. ಕನ್ನಡ ಚಲನಚಿತ್ರರಂಗ ಇಂದು ಉನ್ನತ ಸ್ಥಾನದಲ್ಲಿದ್ದರೆ ಅದಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು ಡಾ.ರಾಜ್ ಎಂದು ಹೆಮ್ಮೆಯಿಂದ ಹೇಳಿದರು.

ಅವರು ರಾಜಕೀಯಕ್ಕೆ ಬಂದಿದ್ದರೆ ಮುಖ್ಯಮಂತ್ರಿ ಆಗಬಹುದಿತ್ತು ಆದರೆ ಅವರು ಕಲೆಯನ್ನು ಬಿಟ್ಟು ಅಧಿಕಾರದ ಆಸೆಗೆ ಹೋಗಲಿಲ್ಲ. ಭಾರತೀಯ ಚಿತ್ರರಂಗಕ್ಕೆ ಮಹಾನ್ ಕೊಡುಗೆಯನ್ನು ನೀಡಿರುವ ಡಾ. ರಾಜಕುಮಾರ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ತೇಜೇಶ್ ಲೋಕೇಶ್ ಗೌಡ
ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚೇತನ್ ರಮೇಶ್, ಸುರೇಶ್ ಗೌಡ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಜು, ಹನುಮಂತಯ್ಯ, ಪ್ರಭಾಕರ್, ಅಭಿ, ಪ್ರದೀಪ್, ಕೃಷ್ಣಪ್ಪ, ರವೀಶ್ ಮತ್ತಿತರರು ಉಪಸ್ಥಿತರಿದ್ದರು.