ಬೆಂಗಳೂರು: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಪಾತ್ರ ಇಲ್ಲದಿದ್ದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್‌ಐಆರ್ ಮಾಡಿ ಎ1 ಆರೋಪಿ ಮಾಡಿದ್ದಾರೆ. ಆತ್ಮಹತ್ಯೆಗೆ ಅವರೇ ಸಂಪೂರ್ಣ ಒತ್ತಡ ಹೇರಿದರೆ ಮಾತ್ರ ಈ ರೀತಿ ಎಫ್‌ಐಆರ್ ಮಾಡಬೇಕಾಗುತ್ತದೆ. ಆದರೆ ಸುಧಾಕರ್ ಗೆ ಚಾಲಕ ಬಾಬು ಅವರ ಜೊತೆ ಆಪ್ತ ಸಂಬಂಧವೇನೂ ಇಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಜಾತಿ ನಿಂದನೆಯ ಆರೋಪ ಬರುವುದೇ ಇಲ್ಲ ಎಂದು ಹೇಳಿದರು.
ಸುಧಾಕರ್ ಆ ವ್ಯಕ್ತಿಯನ್ನು ಎದುರಿಗೆ ನಿಲ್ಲಿಸಿಕೊಂಡು ನಿಂದಿಸಿಲ್ಲ, ಅಥವಾ ಸಂದೇಶ ಕಳುಹಿಸಿಲ್ಲ. ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ನಾಯಕರನ್ನು ಗುರಿಯಾಗಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.
ಈ ಹಿಂದೆ ಶಾಸಕ ಬೈರತಿ ಬಸವರಾಜ್ ಅವರ ಮೇಲೂ ಇದೇ ರೀತಿ ಕ್ರಮ ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಡೆತ್‌ನೋಟ್ ಬರೆದಿಟ್ಟು ಸತ್ತಿದ್ದರು. ಆದರೆ ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಲೇ ಇಲ್ಲ. ಪೊಲೀಸರು ಎಲ್ಲರಿಗೂ ಸಮಾನವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಚಾಲಕ ಬಾಬು ಬೇರೆ ಬೇರೆ ಕಾರಣಗಳಿಂದ ಸಾಲ ಮಾಡಿದ್ದರು. ಅವರಿಗೆ ಕೆಲ ಮಂದಿ ವಂಚನೆ ಮಾಡಿದ್ದರು. ಆದರೆ ಇದರಲ್ಲಿ ಡಾ.ಕೆ.ಸುಧಾಕರ್ ಪಾತ್ರವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಅಶೋಕ್ ಹೇಳಿದರು.
ಈ ಪ್ರಕರಣದಲ್ಲಿ ಡೆತ್‌ನೋಟ್ ಮುಂಚಿತವಾಗಿಯೇ ಸಿಕ್ಕರೂ ಅದನ್ನು ಪೊಲೀಸರಿಗೆ ತಿಳಿಸಿಲ್ಲ. ಚಾಲಕ ಬಾಬು ಅವರ ಕುಟುಂಬದವರು ಡಾ.ಕೆ.ಸುಧಾಕರ್ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದರೂ, ಅವರನ್ನು ಎ1 ಆರೋಪಿ ಮಾಡಿದ್ದಾರೆ ಎಂದು ದೂರಿದರು.
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಶಾಸಕರಾದ ಮುನಿರತ್ನ, ಸಿ.ಟಿ.ರವಿ, ರವಿಕುಮಾರ್ ಮೊದಲಾದ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಮಂಜುನಾಥ್ ಹಾಗೂ ನಾಗೇಶ್ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಚಾಲಕ ಬಾಬು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಹಾಗೆಯೇ ಆನ್‌ಲೈನ್ ಗೇಮ್‌ನಿಂದಲೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಎಲ್ಲೂ ಸಂಸದ ಡಾ.ಕೆ.ಸುಧಾಕರ್ ಅವರ ಬಗ್ಗೆ ಆರೋಪ ಮಾಡಿಲ್ಲ. ನಮ್ಮ ಬಳಿ ಯಾರೇ ಬಂದರೂ ಸಹಾಯ ಮಾಡುತ್ತೇವೆ. ಆದರೆ ಹಾಗೆ ಸಹಾಯ ಕೇಳಿ ಹೋದವರು ಸುಸೈಡ್ ಮಾಡಿಕೊಂಡರೆ ಅದಕ್ಕೆ ನಾವೇ ಕಾರಣರಾಗುವುದಿಲ್ಲ ಎಂದು ತಿಳಿಸಿದರು.
ಈ ಹಿಂದೆ ಕೊಡಗು ಶಾಸಕರಾದ ಮಂಥರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ, ಸಚಿವ ಪ್ರಿಯಾಂಕ್ ಖರ್ಗೆ ಹೆಸರುಗಳು ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷ್ಯಾಧಾರಗಳೂ ಇತ್ತು. ಗುತ್ತಿಗೆದಾರ ಸಚಿನ್ ಪಾಂಚಾಳ್ ಅನೇಕ ಬಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಸಚಿನ್ ಸಚಿವರ ಜೊತೆಗೆ ಮಾತಾಡಿದ್ದರು. ಅಷ್ಟೆಲ್ಲ ಸಾಕ್ಷಿಗಳಿದ್ದರೂ ಸಚಿವರ ವಿರುದ್ಧ ಪೊಲೀಸರು ಕ್ರಮ ವಹಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.