ಒಂದು ದೇಶ ಒಂದು ಚುನಾವಣೆ ರಾಷ್ಟ್ರೀಯ ಪ್ರಮಾದ: ಮಹದೇವಪ್ಪ

Spread the love

ಮೈಸೂರು: ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಎಂಬುದನ್ನು ಮರೆತಿರುವ ಕೇಂದ್ರ ಸರ್ಕಾರ ಈಗ ಒಂದು ದೇಶ ಒಂದು ಚುನಾವಣೆಯನ್ನು ಮಾಡಲು ಹೊರಟಿದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಖಂಡಿಸಿದ್ದಾರೆ.

ನೆಲ ಜಲ ಮತ್ತು ಭಾಷೆ ವಿಷಯದಲ್ಲಿ ಸಾಕಷ್ಟು ವೈವಿಧ್ಯಮಯ ಸನ್ನಿವೇಶವನ್ನು ಹೊಂದಿರುವ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆ ಆದ ಮೇಲೆ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ತಮ್ಮದೇ ಆದ ಕೆಲವೊಂದು ಅಧಿಕಾರವನ್ನು ಪಡೆದಿವೆ.

ರಾಜ್ಯಗಳಿಗೆ ಇರುವಂತಹ ಚುನಾವಣಾ ವ್ಯಾಪ್ತಿಯನ್ನು ಬದಲಿಸುವಂತಹ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ರಾಜ್ಯದ ಅಸ್ತಿತ್ವವನ್ನು ವಿಪರೀತವಾಗಿ ಅವಮಾನಿಸುತ್ತಿದೆ ಎಂದು ಪ್ರಕಟಣೆಯಲ್ಲಿ ಸಚಿವರು ತೀವ್ರ‌ ವಿರೋಧ ವ್ಯಕ್ತಪಡಿಸಿದ್ದಾರೆ.

ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಿಲ್ಲಬೇಕಾದರೆ, ಆಯಾ ರಾಜ್ಯಗಳೇ ಚುನಾವಣಾ ವ್ಯವಸ್ಥೆ ನಡೆಯಲು ಹಣಕಾಸನ್ನು ಒದಗಿಸಬೇಕು,
ಆಗ ಮಾತ್ರ ಚುನಾವಣಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬಹುದು.

ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಯೋಚಿಸಬೇಕೇ ವಿನಃ, ಒಂದು ದೇಶ ಒಂದು ಚುನಾವಣೆ ಎಂಬುದಾಗಿ ಅಲ್ಲ ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಸೋಲುವ ಭಯದಿಂದ ಲೋಕಸಭೆ ಚುನಾವಣೆಯನ್ನೇ ಏಳು ಹಂತದಲ್ಲಿ ನಡೆಸಿದ ಇವರು, ಜಮ್ಮು ಮತ್ತು ಕಾಶ್ಮೀರ ಚುನಾವಣೆಯನ್ನು ಒಟ್ಟಾಗಿ ನಡೆಸಿದರೆ ಎಲ್ಲಿ ಅದರ ಮೇಲಿನ ನಿಯಂತ್ರಣ ಕೈತಪ್ಪುವುದೋ ಎಂದು ಹೆದರಿ ಪ್ರತ್ಯೇಕವಾಗಿ ಈ ರಾಜ್ಯಗಳ ಚುನಾವಣೆ ನಡೆಸುತ್ತಿದ್ದಾರೆ.

ಇಂತವರು ಒಂದು ದೇಶ ಒಂದು ಚುನಾವಣೆ ಎನ್ನುವುದು ಒಂದು ಹಾಸ್ಯಾಸ್ಪದ ಸಂಗತಿಯಾಗಿದ್ದು, ಸ್ಪಷ್ಟತೆ ಇಲ್ಲದ ಮತ್ತು ರಾಜ್ಯ ವಿರೋಧಿ ಆಗಿರುವ ಇವರ ಧೋರಣೆಯ ಬಗ್ಗೆ ದೇಶದ ವಿಪಕ್ಷಗಳು ಗಂಭೀರವಾಗಿ ಹೋರಾಟ ಮಾಡುವಂತಾಗಬೇಕು ಮತ್ತು ಸ್ಟೇಟ್ ಫಂಡಿಂಗ್ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಎಲ್ಲರೂ ಒತ್ತಾಯಿಸಬೇಕು ಎಂದು ಸಚಿವ ಮಹದೇವಪ್ಪ ಕರೆ ನೀಡಿದ್ದಾರೆ.