ಬೆಂಗಳೂರು: ದೇಶದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.
ಅಂಬೇಡ್ಕರ್ ಅವರು ತಮ್ಮ ಬದುಕನ್ನು ಸಾಮಾಜಿಕ ಹೋರಾಟದಲ್ಲಿ ಹಾಗೂ ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡರು. ಅಂಬೇಡ್ಕರ್ ಅವರು ಈ ದೇಶಕ್ಕೆ ಹಾಗೂ ನಮ್ಮ ಸಾಮಾಜಿಕ ಬದುಕಿಗೆ ಅಗತ್ಯವಾದಂತಹ ಸಂವಿಧಾನವನ್ನು ಕೊಟ್ಟಿದ್ದಾರೆ. ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನವೆಂದು ನಮ್ಮ ಸಂವಿಧಾನ ಖ್ಯಾತಿ ಪಡೆದಿದೆ ಸಂವಿಧಾನದ ಶ್ರೇಷ್ಠತೆ ತಿಳಿಯಬೇಕಾದರೆ ಒಳ್ಳೆಯವರ ಕೈಯಲ್ಲಿ ಅನುಷ್ಟಾನವಾಗಬೇಕು. ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಈ ದೇಶದ ಜನರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು ಎಂದು ಮಾರ್ಮಿಕವಾಗಿ ನುಡಿದರು.
ಕೇವಲ ದಲಿತರಿಗಷ್ಟೆ ಅಲ್ಲ ಎಲ್ಲರಿಗೂ ಸಾಮಾಜಿಕ ಅವಕಾಶಗಳನ್ನು ದೊರಕಿಸಲು ಅವರು ಶ್ರಮಿಸಿದರು.ಅವಕಾಶ ವಂಚಿತರು, ಶೋಷಣೆ, ಅನ್ಯಾಯಕ್ಕೆ, ಅವಮಾನಕ್ಕೆ, ದೌರ್ಜನ್ಯಕ್ಕೆ ಒಳಪಟ್ಟ ಎಲ್ಲಾ ಜನರ ಪರವಾಗಿ ಕೆಲಸ ಮಾಡಿದ್ದರು.
ಬಹಳ ಜನ ಸಂವಿಧಾನವನ್ನು ವಿರೋಧಿಸುತ್ತಾರೆ.ಭಾರತ ಬಹು ಸಂಸ್ಕೃತಿಯ, ಬಹುತ್ವದ ದೇಶ. ಅನೇಕ ಜಾತಿ, ಧರ್ಮಗಳಿವೆ. ಅನೇಕ ಭಾಷೆಗಳೂ ಇವೆ. ಇದಕ್ಕೆ ಯೋಗ್ಯವಾದ ಸಂವಿಧಾನವನ್ನು ಕೊಟ್ಟವರು ಅಂಬೇಡ್ಕರ್. ಎಲ್ಲಾ ಧರ್ಮಗಳೂ, ಜಾತಿಗಳೂ ಸಮಾನವಾದುದು. ಮಾನವ ಧರ್ಮಕ್ಕೆ ಒತ್ತು ನೀಡಿದ್ದರು. ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು. ಇದನ್ನು ಅಂಬೇಡ್ಕರ್ ಅವರು ತಮ್ಮ ಬದುಕಿನಲ್ಲಿ ಸಾರಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಬಳ್ಳಾರಿಯಲ್ಲಿ ಮತ್ತೊಂದು ಬಾಣಂತಿಯ ಸಾವು ಸಂಭವಿಸಿರು ಬಗ್ಗೆ ವರದಿಗಾರರ ಪ್ರಶ್ನೆಗೆ,ಈ ಬಗ್ಗೆ ಈಗಾಗಲೇ ಸಭೆ ನಡೆಸಿ ಡ್ರಗ್ಸ್ ಕಂಟ್ರೋಲರ್ ಅವರನ್ನು ಅಮಾನತು ಮಾಡಲಾಗಿದೆ, ಈ ಪ್ರಕರಣದಲ್ಲಿ ಸಾವು ಏಕೆ ಸಂಭವಿಸಿದೆ ಎಂದು ಪರಿಶೀಲಿಸಲಾಗುವುದು ಎಂದು ಸಿಎಂ ಉತ್ತರಿಸಿದರು.