(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಮಾ.3:ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ವೇಳೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ದಶಕಗಳ ನೋವನ್ನು ಜನತೆ ಮುಂದೆ ಬಿಚ್ಚಿಟ್ಟರು.
ಪಟ್ಟಣ ವ್ಯಾಪ್ತಿಯ 29ನೇ ವಾರ್ಡ್ ನ ಬೆಂಡರಹಳ್ಳಿ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಎ.ಆರ್.ಕೃಷ್ಣಮೂರ್ತಿ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ರೇಖಾ ರಮೇಶ್ ಹಾಗೂ ಉಪಾಧ್ಯಕ್ಷ ಎ.ಪಿ ಶಂಕರ್ ಸೇರಿದಂತೆ ಬಹುತೇಕ ಮುಖಂಡರು ತಾವು ಸಚಿವರಾಗಿ ಬಂದು ಈ ಕಟ್ಟಡದ ಉದ್ಘಾಟನೆ ಮಾಡುವಂತಾಗಲಿ ಎಂದು ಹಾರೈಕೆಯ ನುಡಿಗಳನ್ನಾಡಿದರು.

ಆಗ ಮನ ಬಿಚ್ಚಿ ಮಾತನಾಡಿದ ಎ.ಆರ್ ಕೃಷ್ಣಮೂರ್ತಿ ಅವರು ಈ ಮಂತ್ರಿ ಎಂಬುದೇ 19 ವರ್ಷ ವನವಾಸ ಮಾಡಿಸಿತು ನನ್ನೊಡನೆ ರಾಜಕೀಯಕ್ಕೆ ಬಂದ ಬಹುತೇಕರು ಶಾಸಕರಾಗಿ, ಸಚಿವರು, ಸಿ.ಎಂ ಕೂಡ ಆಗಿದ್ದಾರೆ. ಆದರೆ ನನಗೆ ಈ ಸಚಿವ ಸ್ಥಾನದ ವನವಾಸ ಇನ್ನು ಮುಗಿದಿಲ್ಲ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಭಗವಂತನ ಇಚ್ಛೆ ಇದ್ದರೆ ನಿಮ್ಮೆಲ್ಲರ ಇಚ್ಛೆಯಂತೆ ಆಗಲಿ ಎಂದರು.
ಸಂತೇಮರಳ್ಳಿ ಕ್ಷೇತ್ರ ಕ್ಷೇತ್ರ ಪುನರ್ ವಿಂಗಡಣೆ ನೆಲೆಯಲ್ಲಿ ರದ್ದಾದಾಗ 2008 ರ ಚುನಾವಣೆಗೆ ಕೊಳ್ಳೇಗಾಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ,ನಾನು ಅಂದು ಅನಿವಾರ್ಯ ಪರಿಸ್ಥಿತಿಯಿಂದ ಜೆಡಿಎಸ್ ನಲ್ಲಿ ಮುಂದುವರೆದಿದ್ದೆ. ಕಾರಣ ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ನಲ್ಲಿ ಮುಂದುವರೆಯುವಂತೆ ಒತ್ತಾಯಿಸಿದ್ದರು ಎಂದು ಸ್ಮರಿಸಿದರು.
1952 ರಿಂದ ನನ್ನ ತಂದೆ ದಿವಂಗತ ಬಿ ರಾಚಯ್ಯ ದ್ವಿ ಸದಸ್ಯ ಕ್ಷೇತ್ರ ಸಂತೆಮರಳ್ಳಿಯಿಂದ ಜನತಾದಳದಿಂದ ಆಯ್ಕೆಯಾಗಿದ್ದರು ಅದೇ ವೇಳೆ ದಿವಂಗತ ರಾಜಶೇಖರ ಮೂರ್ತಿರವರು ಸಹ ಅದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು ಎಂದು ನೆನೆದರು.
ಮರಳಿ ಮನೆಗೆ ಬುದ್ಧನೆಡೆಗೆ ಕಾರ್ಯಕ್ರಮದಡಿ ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ, ಹೆಚ್. ಎಸ್. ಮಹಾದೇವ ಪ್ರಸಾದ್, ಆರ್.ಧೃವನಾರಾಯಣ್, ಕೆ.ವೆಂಕಟೇಶ್ ಹಾಗೂ ಡಾ.ಹೆಚ್ ಸಿ ಮಹದೇವಪ್ಪ, ಎಸ್ ಜಯಣ್ಣ ಸೇರಿದಂತೆ ಇನ್ನಿತರ ಪ್ರಮುಖರು ಅಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.ಅಂದೇ ನನಗೂ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನವಿತ್ತು ಆದರೆ ಅವಕಾಶವಿರಲಿಲ್ಲ. ಅಂದು ಕಾಂಗ್ರೆಸ್ ಪಕ್ಷದಲ್ಲಿ ನನಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದರೆ ಕಾಂಗ್ರೆಸ್ ಸೇರುತ್ತಿದ್ದೆ. ಈ ವೇಳೆ ನಾನು ಕಾಂಗ್ರೆಸ್ ಸೇರಲು ಸಾಧ್ಯವಾಗಲಿಲ್ಲ. ಅಂದು. ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಆದರೂ ಅಭಿಪ್ರಾಯ ಬೇರೆಯೇ ಆಗಿತ್ತು. ಪರಿಸ್ಥಿತಿ ಸರಿ ಇಲ್ಲದ ಕಾರಣ ನನಗೆ ಪಕ್ಷ ಸೇರಲು ಅವಕಾಶ ನೀಡಿರಲಿಲ್ಲ ಎಂದು ಹೇಳಿದರು.
1994 ರಲ್ಲಿ ನನಗೂ ಬಿಜೆಪಿಗೂ ವಿರೋಧವಿತ್ತು. ಅಂದು ಧ್ರುವನಾರಾಯಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ನಂತರ 2003 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 3000 ಓಟು ಪಡೆದುಕೊಂಡಿತು. ಇದು ಧೃವನಾರಾಯಣ್ ಅವರನ್ನ ಗೆಲ್ಲಿಸ ಬೇಕೆಂದು ಕೊಟ್ಟ ಮತವಲ್ಲ ಎ.ಆರ್ ಕೃಷ್ಣಮೂರ್ತಿ ಸೋಲಿಸಬೇಕೆಂದು ಕೊಟ್ಟ ಮತ. ಅಂದು ನಿರಂತರವಾಗಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದೆ, ನೊಂದು ಬೆಂದು ಹೋಗಿದ್ದೆ. ಹಾಗಾಗಿ ಅಂದು ಮತ ಭಿಕ್ಷೆ ಎನ್ನುವ ಪದ ಬಳಕೆ ಮಾಡುತ್ತಿದೆ. ಈ ಭಾರಿ ಸೋತಿದ್ದರೆ ರಾಜಕೀಯ ತ್ಯಜಿಸಬೇಕೆಂದಿದ್ದೆ ಮನದಾಳದ ನೋವನ್ನು ಕೃಷ್ಣಮೂರ್ತಿ ತೋಡಿಕೊಂಡರು.
2018 ರ ವರೆಗೂ ಕ್ಷೇತ್ರದಲ್ಲಿ 52000 ಮತ ಪಡೆದವರು ಸೋತಿರಲಿಲ್ಲ ಆದರೆ ನಾನು 53,000 ಮತ ಪಡೆದು ಸೋತಿದ್ದೆ. ಆ ಚುನಾವಣೆಯಲ್ಲಿ ಎಸ್.ಬಾಲರಾಜು ಪಕ್ಷ ಬಿಟ್ಟು ಹೋದರು ಜಿ ಎನ್ ನಂಜುಂಡಸ್ವಾಮಿ ಬಂದರು.
ನಾನು ಒಂದು ಓಟಿನಿಂದ ಸೋತರು ಯಾವುದೇ ಮಾಧ್ಯಮ ಸಂಸ್ಥೆ ನನ್ನ ಸಂದರ್ಶನ ಮಾಡಲಿಲ್ಲ, ನಾನು ಸಾಕಷ್ಟು ನಿರೀಕ್ಷಿಸಿದ್ದೆ ಆದರೆ ಪ್ರಜಾವಾಣಿ ಪತ್ರಿಕೆಯ ಮೈಸೂರು ವರದಿಗಾರರೊಬ್ಬರು ನನ್ನನ್ನು ಸಂದರ್ಶಿಸಿದ್ದರು ಉಳಿದ ಯಾವುದೇ ಮಾಧ್ಯಮ ಸಂಸ್ಥೆಗಳು ನನ್ನ ಸಂದರ್ಶನ ಮಾಡಿರಲಿಲ್ಲ ಇದು ನನಗೆ ತುಂಬಾ ನೋವುಂಟು ಮಾಡಿತ್ತು ಎಂದು ನೊಂದು ನುಡಿದರು.

ಆದರೆ ಬಿ. ಬಿ. ಸಿ ಹಾಗೂ ಸಿ.ಎನ್.ಎನ್ ಚಾನಲ್ ಗಳು ನನ್ನನ್ನು ಪ್ರಪಂಚದಾದ್ಯಂತ ಸುದ್ದಿ ಮಾಡಿದ್ದವು.
ಈಗಲೂ ಕೂಡ ಒಂದು ಓಟಿನ ಮಹತ್ವದ ಬಗ್ಗೆ ಕ್ವಿಜ್ ನಲ್ಲಿ ಬರುತ್ತದೆ ಅಂಬೇಡ್ಕರ್ ರವರು ಓಟಿನ ಮಹತ್ವ ಏನೆಂದು ತೋರಿಸಿ ಕೊಟ್ಟಿದ್ದರು. ಆದರೆ ಒಂದು ಓಟಿನ ಮಹತ್ವ ಏನೆಂದು ಒಂದು ಮತದಿಂದ ನನಗಾದ ಸೋಲು ತಿಳಿಸಿಕೊಟ್ಟಿದೆ. ಈ ಮೂಲಕ ಗುಂಡಿಗಿಂತ ಹರಿತವಾದದ್ದು ಮತದಾನ ಎಂಬುದನ್ನು ಮತದಾರರು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಅಂದು ನೂತನ ಸಂಸತ್ ಭವನದ ಮುಂದೆ ಅಂಬೇಡ್ಕರ್ ಅವರ ಪುತ್ತಳಿ ಅನಾವರಣ ಮಾಡುವ ವೇಳೆ ಅಂಬೇಡ್ಕರ್ ಪಾದಕ್ಕೆ ತಲೆ ಇಟ್ಟು ಸ್ಮರಿಸಿದ್ದರು. ಆದರೆ ಮೋದಿಯವರು ಎಂದೂ ಸಹ ದಲಿತರ ಬಗ್ಗೆ ಕಾಳಜಿ ತೋರಲಿಲ್ಲ ಇದು ನಾಟಕ ಎಂಬಂತೆ ಕಾಣುತ್ತದೆ ಎಂದ ಅವರು ಹೊರ ಜಗತ್ತಿಗೆ ನಿಮ್ಮ ಕ್ಷೇತ್ರಕ್ಕೆ ನಾನು ಶಾಸಕ ಆದರೆ ನನ್ನ ಕ್ಷೇತ್ರಕ್ಕೆ ನಾನು ಜನ ಸೇವಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದೇ ವೇಳೆ ಬೆಂಡರಹಳ್ಳಿ ಬಡಾವಣೆಯಲ್ಲಿ ಶಾಸಕರ ನಿಧಿಯಿಂದ 10 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದೇನೆ ಬೆಂಡರಹಳ್ಳಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಅಚ್ಚುಕಟ್ಟಾಗಿ ನಡೆದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಎಂದು ಶಾಸಕರು ಹಾರೈಸಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷರು ರೇಖಾ, ಉಪಾಧ್ಯಕ್ಷರು ಎ.ಪಿ.ಶಂಕರ್, ಸದಸ್ಯರಾದ ರಮ್ಯ ಮಹೇಶ್, ಮಂಜುನಾಥ್, ಜಿ.ಪಿ.ಶಿವಕುಮಾರ್, ದೇವಾನಂದ, ಮಾಜಿ ಸದಸ್ಯ ಮಹದೇವಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಶಾಸಕರ ಆಪ್ತ ಕಾರ್ಯದರ್ಶಿ ಬಸ್ತೀಪುರ ರವಿ,ಬೆಂಡರಹಳ್ಳಿ ಯಜಮಾನರು ರಾಜಪ್ಪ, ಅಶೋಕ, ಮಹದೇವ, ಸೋಮಣ್ಣ, ತೋಪರಾಜ್, ಮುಖಂಡರಾದ ಮಹೇಂದ್ರ, ಎಂ.ಶಾಂತರಾಜು, ಲಿಂಗರಾಜು, ಶ್ರೀಕಂಠ, ಭೀಮ, ಮಲ್ಲರಾಜು, ರವಿಕುಮಾರ್, ಲಿಂಗರಾಜು, ಜೈರಾಜು, ನಿರ್ಮಿತಿ ಕೇಂದ್ರ ಉಪಯೋಜನಾ ವ್ಯವಸ್ಥಾಪಕರು ಪ್ರತಾಪ್ ಕುಮಾರ್.ಎಂ.ಮತ್ತಿತರರು ಹಾಜರಿದ್ದರು.