ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

ಮೈಸೂರು: ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ದಿಂದ ಬೇಸತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಬೆಳಬಾಡಿ ಗ್ರಾಮದಲ್ಲಿ ನಡೆದಿದೆ.

ಬೆಳವಾಡಿ ಗ್ರಾಮದ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ವರದಕ್ಷಿಣೆ ತರುವಂತೆ ಪೀಡಿಸಿದ ಗಂಡ ಮಹೇಶ್ ಹಾಗೂ ಅತ್ತೆ ರತ್ನಮ್ಮ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2021ರಲ್ಲಿ ಶಿಲ್ಪಾ ಹಾಗೂ ರಾಮನಗರದ ಬಿಡದಿ ನಿವಾಸಿ ಮಹೇಶ್ ವಿವಾಹವಾಗಿತ್ತು, ಮದುವೆ ಸಮಯದಲ್ಲಿ ವರದಕ್ಷಿಣೆ ನಿರಾಕರಿಸಿದ್ದರು,ಆದರೆ ಕೆಲದಿನಗಳಲ್ಲೇ ಹಂತ ಹಂತವಾಗಿ ವರದಕ್ಷಿಣೆ ಪಡೆಯುವುದಾಗಿ ತಿಳಿಸಿ ಮದುವೆ ಮಾಡಿಕೊಡುವಂತೆ ಪತಿಯ ಮನೆಯವರು ಹೇಳಿದ್ದರು.

ಪ್ರಾರಂಭದಲ್ಲಿ ಅನ್ಯೋನ್ಯತೆಯಿಂದ ನೋಡಿಕೊಂಡ ಪತಿ ಮನೆಯವರು ನಂತರ ವರದಕ್ಷಿಣೆಗಾಗಿ ಪೀಡಿಸಲಾರಂಭಿಸಿದರು.

ಶಿಲ್ಪಾ ತಾಯಿ ಲಕ್ಷ್ಮಮ್ಮ ಕೂಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು, ಹೀಗಿದ್ದೂ ಹಣ ಹೊಂದಿಸಿ ಚಿನ್ನ ಕೊಡಿಸಿದ್ದರು. ಶಿಲ್ಪ ಗಂಡು ಮಗುವಿಗೆ ಜನ್ಮ ನೀಡಿದ್ದರು.ಈ ಸಮಯದಲ್ಲೂ ವರದಕ್ಷಿಣೆ ನೀಡುವಂತೆ ಮಹೇಶ್ ಹಾಗೂ ಈತನ ತಾಯಿ ರತ್ನಮ್ಮ ಒತ್ತಾಯಿಸಿದ್ದರು.

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಶಿಲ್ಪ ಕೆಲವು ದಿನಗಳ ಹಿಂದೆ ತವರು ಮನೆ ಬಂದರು
ಲಕ್ಷ್ಮಮ್ಮ ಅವರ ಹೆಸರಿನಲ್ಲಿದ್ದ ಹಳೆ ಮನೆಯನ್ನ ಮಹೇಶ್ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹಾಕಿದ್ದರು.

ವರದಕ್ಷಿಣೆ ಕೊಟ್ಟರೆ ಮಾತ್ರ ಅತ್ತೆ ಮನೆಯಲ್ಲಿ ನೆಮ್ಮದಿ ಎಂದು ತಾಯಿ ಜೊತೆ ಆಗಾಗ ಶಿಲ್ಪ ಹೇಳುತ್ತಿದ್ದಳು,ಆಗ ಗಂಡನ ಜೊತೆ ಬಾಳುವಂತೆ ತಾಯಿ ಬುದ್ದಿವಾದ ಹೇಳಿದ್ದರು.

ಮನೆಯಲ್ಲಿ ಯಾರು ಇಲ್ಲದ ವೇಳೆ ಶಿಲ್ಪ ನೇಣಿಗೆ ಶರಣಾಗಿದ್ದಾಳೆ.

ಶಿಲ್ಪ ಸಾವಿಗೆ ವರದಕ್ಷಿಣೆ ಕಿರುಕುಳ ಎಂದು ಆರೋಪಿಸಿ ತಾಯಿ ಲಕ್ಷ್ಮಮ್ಮ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಳಿಯ ಮಹೇಶ್ ಹಾಗೂ ಆತನ ತಾಯಿ ರತ್ನಮ್ಮ ವಿರುದ್ದ ದೂರು ನೀಡಿದ್ದಾರೆ.