ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವಿಲ್ಲ-ಅಶೋಕ್

Spread the love

ಬೆಂಗಳೂರು: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ,ನಿಮ್ಮ ಮುಖ್ಯ ಮಂತ್ರಿ ಕೈನಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಸಾಧ್ಯವೆ ಎಂದು ಪ್ರತಿ ಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

352 ಸೀಟು ಗೆದ್ದಿದ್ದ ನಿಮ್ಮ ಪರಮೋಚ್ಛ ನಾಯಕ ರಾಹುಲ್‌ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರ ಕೈಯಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಆಗಲಿಲ್ಲ,414 ಸೀಟು ಗೆದ್ದಿದ್ದ ರಾಜೀವ್ ಗಾಂಧಿ ಅವರ ಕೈನಲ್ಲೂ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಆಗಲಿಲ್ಲ ಇನ್ನು ಸಿದ್ದರಾಮಯ್ಯ ಅವರು ಏನು ಮಾಡಲು ಸಾಧ್ಯ ಎಂದು ಕುಟುಕಿದ್ದಾರೆ.

ಸಂಘವನ್ನ ಮತ್ತು ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡುವುದು ಅಸಾಧ್ಯ,ಆದರೆ ನಿಮಗೆ ಒಂದು ಸವಾಲು ಹಾಕುತ್ತೇನೆ, ನಿಮಗೆ ತಾಕತ್ತಿದ್ದರೆ, ನೀವು ನಂಬಿರುವ ಸಿದ್ಧಾಂತದ ಬಗ್ಗೆ ನಿಜಕ್ಕೂ ಬದ್ಧತೆ ಇದ್ದರೆ ಮೊದಲು ಅದನ್ನು ಮಾಡಿ ತೋರಿಸಿ‌ ಎಂದು ಅಶೋಕ್ ಟ್ವೀಟ್ ಮಾಡಿ ಸವಾಲು ಹಾಕಿದ್ದಾರೆ.

ಆರೂವರೆ ಕೋಟಿ ಕನ್ನಡಿಗರ ಪಾಲಿಗೆ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಸದನ ಕಲಾಪದ ವೇಳೆ ನಿಮ್ಮ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ‌ ಡಿ.ಕೆ.ಶಿವಕುಮಾರ್ ಅವರು ಹೆಮ್ಮೆಯಿಂದ ಸಂಘ ಗೀತೆ ಹಾಡಿದ್ದಾರೆ.

ಸಂಘದ ಚಟುವಟಕೆಗಳನ್ನು ನಿಷೇಧ ಮಾಡುವ ಮುನ್ನ ಮೊದಲು ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರಿಗೆ ಪತ್ರ ಬರೆದು ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿಸಿ ನೋಡೋಣ,ಆಗುತ್ತಾ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವ ತಾವು ಭಾರತದ ಏಕತೆ, ಸಮಗ್ರತೆ, ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವುದು ನಿಜಕ್ಕೂ ಹಾಸ್ಯಾಸ್ಪದ.

ನಿಮ್ಮ ವೈಫಲ್ಯ, ದುರಾಡಳಿತವನ್ನ ಮುಚ್ಚಿಕೊಳ್ಳಲು ಈ ರೀತಿ ಕೆಲಸಕ್ಕೆ ಬಾರದ ಪತ್ರಗಳನ್ನು ಬರೆಯುವುದು ಬಿಟ್ಟು ನಿಮ್ಮ ಖಾತೆಗಳನ್ನು ಸರಿಯಾಗಿ ನಿರ್ವಹಿಸಿ, ನೆರೆಯಿಂದ ಸಂಕಷ್ಟದಲ್ಲಿರುವ ಕಲ್ಯಾಣ ಕರ್ನಾಟಕದ ರೈತರಿಗೆ ನೆರವು ನೀಡುವ ಕೆಲಸ ಮಾಡಿ ಎಂದು ಅಶೋಕ್‌ ಹೇಳಿದ್ದಾರೆ.