ಬೆಂಗಳೂರು: ಸುರಂಗ ಮಾರ್ಗ, ರಸ್ತೆ ಅಭಿವೃದ್ಧಿ ಮುಂತಾದ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲು ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಿ ಬಿಬಿಎಂಪಿಯನ್ನು ಕತ್ತು ಹಿಸುಕಿ ಸಾಯಿಸಬೇಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಗರಂ ಆಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬಿಬಿಎಂಪಿಯನ್ನು ಸಾಯಿಸಲು ಆಮ್ ಆದ್ಮಿ ಪಕ್ಷ ಎಂದಿಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಳೆದ ಬಜೆಟ್ ನಲ್ಲಿ 7 ಸಾವಿರ ಕೋಟಿಗಳನ್ನು ಬೆಂಗಳೂರು ಅಭಿವೃದ್ಧಿಗಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಸ್ಪೆಷಲ್ ಪರ್ಪಸ್ ವೆಹಿಕಲ್ ಎಂಬ ನೆಪದಲ್ಲಿ ಪ್ರತ್ಯೇಕ ಲಿಮಿಟೆಡ್ ಕಂಪನಿಯನ್ನು ಮಾಡಲು ಹೊರಟಿರುವುದು ಸಂಪೂರ್ಣ ಭ್ರಷ್ಟಾಚಾರ ಮಾಡಲು ಹೂಡಿರುವ ಕುತಂತ್ರ ಎಂದು ಆರೋಪಿಸಿದರು.
ಈಗಾಗಲೇ ಬಿಬಿಎಂಪಿಯಿಂದ ಕಸ ನಿರ್ವಹಣೆ, ರಸ್ತೆ ಅಭಿವೃದ್ಧಿ ಯಂತಹ ಕೆಲಸಗಳಿಗೆ ಪ್ರತ್ಯೇಕ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಾಡಿ ಬೆಂಗಳೂರನ್ನು ಅಭಿವೃದ್ಧಿ ಮಾಡಿರುವುದು ಅಷ್ಟರಲ್ಲಿಯೇ ಇದೆ.ಎಲ್ಲೂ ಸಹ ಪಾರದರ್ಶಕತೆ ಕಂಡುಬಂದಿಲ್ಲ. ಈ ಕಂಪನಿಗಳು ಸಂಪೂರ್ಣ ಭ್ರಷ್ಟಾಚಾರಿಗಳ
ಕೂಪವಾಗಿದೆಯೇ ಹೊರತು ಮತ್ತೇನು ಸಾಧಿಸಿಲ್ಲ ಎಂದು ಟೀಕಿಸಿದರು.
ಬಿಬಿಎಂಪಿಯು ಬೆಂಗಳೂರಿನ ಅಭಿವೃದ್ಧಿಯನ್ನು ಮಾಡಲು ಸಂಪೂರ್ಣ ಸ್ವಶಕ್ತವಾಗಿದೆ. ಇಲ್ಲಿನ 500ಕ್ಕೂ ಹೆಚ್ಚು ಇಂಜಿನಿಯರ್ ಗಳು ಇಂತಹ ಬೃಹತ್ ಕಾಮಗಾರಿಗಳನ್ನು ನಿರ್ವಹಿಸಲು ಪರಿಣಿತಿಯನ್ನು ಹೊಂದಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಬಿಬಿಎಂಪಿಯ ಮೂಲಕ ಈ ಬೃಹತ್ ಕಾಮಗಾರಿಗಳನ್ನು ಮಾಡಲು ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಆಮ್ ಆದ್ಮಿ ಪಕ್ಷ ಉಗ್ರ ಹೋರಾಟಕ್ಕೆ ಇಳಿಯುತ್ತದೆ ಎಂದು ಜಗದೀಶ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಶಶಿಧರ ಆರಾಧ್ಯ, ಬೆಂಗಳೂರು ಯುವ ಘಟಕದ ಅಧ್ಯಕ್ಷ ಉಮೇಶ್ ಪಿಳ್ಳೆ ಗೌಡ ಉಪಸ್ಥಿತರಿದ್ದರು.