ಸಮೀಕ್ಷೆ‌ ವೇಳೆ ಜನರು ವೈಯಕ್ತಿಕ ಮಾಹಿತಿ ನೀಡಬೇಕಿಲ್ಲ:ಆರ್‌.ಅಶೋಕ್ ಸಲಹೆ

Spread the love

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿಗಳನ್ನು ನೀಡಲೇಬೇಕು ಎಂದೇನಿಲ್ಲ, ಸೂಕ್ತ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯಲ್ಲಿ ಜನರು ಎಲ್ಲ ವಿವರವನ್ನು ಬಹಿರಂಗೊಳಿಸಬಾರದು. ಜನರ ಬಳಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಇದನ್ನು ಕಾಂಗ್ರೆಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಖಜಾನೆಯಲ್ಲಿ ಹಣವಿಲ್ಲದೆ, ರೇಷನ್‌ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಅದಕ್ಕಾಗಿ ಮಾನದಂಡ ಬೇಕಾಗುತ್ತದೆ.ಈ ಕಾರಣಕ್ಕಾಗಿ ಹಾಗೂ ಯೋಜನೆಗಳಿಗೆ ಕತ್ತರಿ ಹಾಕಲು ಜಾತಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಮುಂದಿನ ಬಜೆಟ್‌ ರಚನೆ ಸಿಎಂ ಸಿದ್ದರಾಮಯ್ಯನವರಿಗೆ ಕಗ್ಗಂಟಾಗಿದೆ. ಅದಕ್ಕಾಗಿ ಹಣ ಉಳಿಸಬೇಕಿದೆ. ಇದು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅಲ್ಲ, ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ ಜನರಿಗೆ ಪಂಗನಾಮ ಹಾಕುವ ಸಮೀಕ್ಷೆ ಎಂದು ಕಿಡಿಕಾರಿದರು.

ಯಾರೂ ವೈಯಕ್ತಿಕ ದಾಖಲೆಗಳನ್ನು ನೀಡಬಾರದು, ಯಾವ್ಯಾವ ಪ್ರಶ್ನೆಗೆ ಉತ್ತರ ಕೊಡಬಹುದೋ ಅಷ್ಟನ್ನು ಮಾತ್ರ ನೀಡಿದರೆ ಸಾಕು. ಹೈಕೋರ್ಟ್‌ ಕೂಡ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ ಎಂದಿದೆ ಎಂದು ಅಶೋಕ್ ತಿಳಿಸಿದರು.

ತಮಿಳುನಾಡಿನ ಕರೂರಿನಲ್ಲಾದ ಕಾಲ್ತುಳಿತದ ಘಟನೆಯಿಂದ ಇಡೀ ದೇಶ ಬೆಚ್ಚಿಬಿದ್ದಿದೆ. ವಿಧಾನಸೌಧದ ಮುಂಭಾಗ ಕಾಂಗ್ರೆಸ್‌ ಸರ್ಕಾರದಿಂದ ನಡೆದಿದ್ದ ಆರ್‌ಸಿಬಿ ಸಂಭ್ರಮಾಚರಣೆಯಲ್ಲಾದ ಕಾಲ್ತುಳಿತ ಘಟನೆಯಿಂದಲೇ ನಾವೆಲ್ಲ ದುಃಖಕ್ಕೊಳಗಾಗಿದ್ದೆವು. ತಮಿಳುನಾಡಿನಲ್ಲಿ ನಡೆದಿರುವ ದುರ್ಘಟನೆ ಇದಕ್ಕಿಂತಲೂ ದೊಡ್ಡದಾಗಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ. ಡಿಎಂಕೆ ಸರ್ಕಾರ 10 ಸಾವಿರ ಜನರಿಗೆ ಅನುಮತಿ ನೀಡಿದೆ. ಆದರೆ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿಲ್ಲ. ಈ ಹಿಂದೆಯೇ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿದ್ದರೂ, ಅದನ್ನು ಸರ್ಕಾರ ಧಿಕ್ಕರಿಸಿದೆ. ಈ ಅನಾಹುತಕ್ಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು.

ನಟ ವಿಜಯ್‌ ಕೂಡಲೇ ಕ್ಷಮಾಪಣೆ ಕೇಳಿ, ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಅದನ್ನು ವಿಜಯ್‌ ಮಾಡಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ತನಿಖೆಗೆ ನೀಡಬೇಕೆಂದು ಕರ್ನಾಟಕದ ಬಿಜೆಪಿ ಘಟಕ ಆಗ್ರಹಿಸುತ್ತಿದೆ ಎಂದು ಹೇಳಿದರು.

ಬೆಳಗಾವಿ, ರಾಯಚೂರು, ವಿಜಯಪುರ ಮೊದಲಾದ ಭಾಗಗಳಲ್ಲಿ ಪ್ರವಾಸ ಮಾಡಿ ಮಳೆ ಹಾನಿ ಪರಿಶೀಲನೆ ಮಾಡುತ್ತೇನೆ. ಹಿಂದೆ ಬಿಜೆಪಿ ಇದ್ದಾಗ ಜನರಿಗೆ ಉತ್ತಮ ಪರಿಹಾರ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಏನೂ ನೀಡುತ್ತಿಲ್ಲ ಎಂದು ಅಶೋಕ್‌ ಗಂಭೀರ ಆರೋಪ ಮಾಡಿದರು.