ಡಿಕೆಶಿ ದುರ್ವರ್ತನೆ; ಬೆಂಗಳೂರು ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ-ಎಎಪಿ‌ ಕಳವಳ

Spread the love

ಬೆಂಗಳೂರು: ಉಪ ಮುಖ್ಯ ಮಂತ್ರಿ‌ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರ ದುರ್ವರ್ತನೆಯಿಂದ ಬೆಂಗಳೂರು ನಗರ ಐಟಿ ಸಿಟಿ ಪಟ್ಟ ಕಳೆದುಕೊಳ್ಳಲಿದೆ ಎಂದು ಎಎಪಿ ಆರೋಪಿಸಿದೆ.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಬಗ್ಗೆ ಡಿ.ಕೆ. ಶಿವಕುಮಾರ್ ವಾಗ್ದಾಳಿ ಕುರಿತು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಪ್ರತಿಕ್ರಿಯಿಸಿದ್ದು,ಬೆಂಗಳೂರು ಸಿಲಿಕಾನ್ ನಗರ ವೆಂದು ಖ್ಯಾತಿಗೊಳ್ಳಲು ಇಲ್ಲಿನ ಐಟಿ ಉದ್ಯಮಿಗಳ ಕೊಡುಗೆ ಸಾಕಷ್ಟು ಮಟ್ಟದಲ್ಲಿದೆ ಎಂದು ಹೇಳಿದರು.

ದೇಶಕ್ಕೆ ಎರಡನೇ ಅತಿ ದೊಡ್ಡ ತೆರಿಗೆಯನ್ನು ನೀಡುವ ಹಾಗೂ ದೇಶದ ಆರ್ಥಿಕ ಇಂಜಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಐಟಿ ಉದ್ಯಮಗಳು, ಇಲ್ಲಿನ ಉದ್ಯೋಗಿಗಳು ಹಾಗೂ ಅವರಿಗೆ ಪೂರಕವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಕಂಪನಿಗಳು ಪ್ರಮುಖ ಕಾರಣವಾಗಿವೆ ಎಂದು ತಿಳಿಸಿದರು.

ಈ ಬಗ್ಗೆ ಕನಿಷ್ಠ ಜ್ಞಾನವು ಇಲ್ಲದ ಬೆಂಗಳೂರು ನಗರಾಭಿವೃದ್ಧಿಯ ಹೊಣೆಯನ್ನು ಹೊತ್ತಿರುವ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ದುರ್ವರ್ತನಕಾರಿ ಹೇಳಿಕೆಗಳಿಂದಾಗಿ ಏಷ್ಯಾದ ಅತಿ ದೊಡ್ಡ ಹೂಡಿಕೆಯಾದ ಗೂಗಲ್ ಸಂಸ್ಥೆಯ ಕೃತಕ ಬುದ್ಧಿಮತ್ತೆಯ ಡೇಟಾ ಮೈನಿಂಗ್ ಕೇಂದ್ರವು ವಿಶಾಖಪಟ್ಟಣದ ಪಾಲಾಗಿದೆ.ಅವರ ಈ ರೀತಿಯ ನಡೆಯಿಂದಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುಂಠಿತಗೊಳ್ಳುವುದು ನಿಸ್ಸಂದೇಹ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಎರಡು ದಶಕಗಳಿಂದ ಆಳಿರುವ ಮೂರೂ ಪಕ್ಷಗಳು ಬೆಂಗಳೂರಿಗರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಲು ವಿಫಲವಾಗಿವೆ ಎಂದು ಸೀತಾರಾಮ್ ಗುಂಡಪ್ಪ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನ ಮೂಲಭೂತ ಸೌಕರ್ಯದ ನೆಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಕೊಳ್ಳೆಹೊಡೆಯುವ ಮಾರ್ಗಗಳನ್ನು ಕಾಂಗ್ರೆಸ್ ನವರು ಹುಡುಕಿಕೊಂಡಿದ್ದಾರೆ. ಇತ್ತೀಚೆಗೆ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪ ಮಾಡಿಕೊಂಡೆ ಬಂದ ಕಾಂಗ್ರೆಸ್ ಪಕ್ಷ ಸಹ ಯಾವುದೇ ತನಿಖೆಯನ್ನು ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯನ್ನು ನೀಡುವುದನ್ನು ಬಿಟ್ಟು ತಾವೇ 60% ಕಮಿಷನ್ ದಂಧೆಗೆ ಇಳಿದಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣಗಳಾಗಿವೆ ಎಂದು ದೂರಿದರು.

ಡಿಕೆಶಿಯವರ ದುರಹಂಕಾರದ ಹೇಳಿಕೆಗಳು ಇಲ್ಲಿನ ಐಟಿ ಉದ್ಯಮಿಗಳು ಬೆಂಗಳೂರನ್ನು ಬಿಡುವಂತೆ ಪ್ರಚೋದಿಸುತ್ತದೆ. ಉದ್ಯಮಿಗಳಿಗೆ ಪೂರಕವಾದ ಉತ್ತಮ ರಸ್ತೆ , ನೀರು, ಒಳಚರಂಡಿ, ಸಂಚಾರ ವ್ಯವಸ್ಥೆಯಂತಹ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವುದನ್ನು ಬಿಟ್ಟು ಪ್ರತಿದಿನವೂ ಈ ರೀತಿಯ ಅಹಂಕಾರದ ಮಾತುಗಳನ್ನು ಬೆಂಗಳೂರಿಗರು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಅದರಲ್ಲೂ ಕನ್ನಡಿಗ ಐಟಿ ಉದ್ಯೋಗಿಗಳಿಗೆ ಆತಂಕದ ಪರಿಸ್ಥಿತಿ ಇದೆ. ಇಂಥ ಸೂಕ್ಷ್ಮಗಳನ್ನು ಅರಿತು ಮುಖ್ಯಮಂತ್ರಿಗಳು ಡಿಕೆಶಿಯವರ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸೀತಾರಾಮ್ ಗುಂಡಪ್ಪ ಅಗ್ರಹಿಸಿದರು.