ಚನ್ನಪಟ್ಟಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದ ಮನೆ ಮಗ ಎನ್ನುವುದಾದರೆ ಇಲ್ಲಿನ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಿಕೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಚುನಾವಣೆ ಬಂದಾಗ ನಾಟಕ ಮಾಡಲು ಮಾತ್ರ ಈ ರೀತಿಯ ಭಾವನಾತ್ಮಕ ಮಾತು ಆಡುತ್ತಾರೆ ಎಂದು ಟೀಕಿಸಿದರು.
ನಿಖಿಲ್ ಪರ ಪ್ರಚಾರ ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅಶೋಕ್, ನಿಖಿಲ್ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎರಡೂ ಪಕ್ಷ ಇರುವುದರಿಂದ ಗೆಲುವು ಸುಲಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತಗಳೂ ಸಿಗುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ಸರ್ಕಾರದಲ್ಲಿನ ಭ್ರಷ್ಟಾಚಾರ, ಮುಡಾ ಹಗರಣ, ದಲಿತರ ಹಣವನ್ನು ಬೇರೆಡೆ ವರ್ಗಾಯಿಸಿರುವುದು ಮೊದಲಾದ ಕಾರಣಗಳಿಂದ ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿದರು.
ಈ 16 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನಪಟ್ಟಣಕ್ಕಾಗಲೀ, ರಾಮನಗರಕ್ಕಾಗಲೀ ಭೇಟಿ ನೀಡಿಲ್ಲ. ಭೇಟಿ ನೀಡಲು ಕೂಡ ಸಮಯವಿಲ್ಲವೆಂದಾದರೆ ಅಭಿವೃದ್ಧಿ ಹೇಗೆ ಮಾಡುತ್ತಾರೆ, ಡಿ.ಕೆ.ಶಿವಕುಮಾರ್ ನಾನು ಮನೆ ಮಗ ಎಂದು ಜನರ ಕಿವಿ ಮೇಲೆ ಹೂ ಇಡಲು ನೋಡಿದ್ದರು. ನಂತರ ತಾಯಿ ಜಿಲ್ಲೆಯನ್ನು ಬಿಟ್ಟು ಬೆಂಗಳೂರಿನ ಉಸ್ತುವಾರಿ ಪಡೆದುಕೊಂಡರು. ರಾಮಲಿಂಗಾರೆಡ್ಡಿ ಅವರನ್ನು ಇಲ್ಲಿನ ಜಿಲ್ಲಾ ಉಸ್ತುವಾರಿ ಮಾಡಿದ್ದರೂ, ಅವರಿಗೆ ಇಲ್ಲಿಗೆ ಬರಲು ಇಷ್ಟವಿಲ್ಲ. ಚುನಾವಣೆ ಬಂದಿರುವುದರಿಂದ ನಾಟಕ ಮಾಡಲು ಇಲ್ಲಿಗೆ ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಅಷ್ಟೊಂದು ಪ್ರೀತಿ ಇದ್ದರೆ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಬೇಕಿತ್ತು. ಬೆಂಗಳೂರಿನಲ್ಲಿ ಸಮೃದ್ಧಿ ಮಾಡಲು ಹೊರಟಿದ್ದಾರೆ. ಆದರೆ ಚನ್ನಪಟ್ಟಣ ಅಭಿವೃದ್ಧಿಗೆ ಹತ್ತು ಪೈಸೆ ಹಣವಿಲ್ಲ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.
ಸಿ.ಪಿ.ಯೋಗೇಶ್ವರ್ ತಾವೇ ನೀರಾವರಿ ಯೋಜನೆ ತಂದಿದ್ದೇನೆಂದು ಹೇಳಿಕೊಂಡರು ಕೂಡ, ಅನುದಾನ ಮಂಜೂರು ಮಾಡಿದ್ದು ಬಿಜೆಪಿ ಸರ್ಕಾರವೇ ಹೊರತು ಅವರಲ್ಲ. ಅದಕ್ಕಿಂತ ಹೆಚ್ಚಾಗಿ ಇಲ್ಲಿ ಎಂಜಿನಿಯರ್ ಆಗಿದ್ದ ವೆಂಕಟೇಗೌಡ ನಮ್ಮ ಬಳಿ ಬಂದು ಅನುದಾನ ಮಂಜೂರು ಮಾಡಿಸಿಕೊಂಡಿದ್ದರು ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಭಾವನಾತ್ಮಕ ಜೀವಿ, ಆದರೆ ಕಾಂಗ್ರೆಸ್ ನಾಯಕರು ಕಟುಕರು. ಕುಮಾರಸ್ವಾಮಿ ಕಾರಿನಲ್ಲಿ ಹೋಗುತ್ತಿರುವಾಗ ಬಡ ವ್ಯಕ್ತಿ ಕಂಡರೆ ಅವನ ಬಳಿ ಹೋಗಿ ಸಹಾಯ ಮಾಡುತ್ತಾರೆ. ಆದರೆ ಕಾಂಗ್ರೆಸ್ ನವರು ಈ ಭಾವನೆಯನ್ನೇ ತಮಾಷೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.