ಬೆಂಗಳೂರು: ಪೊಲೀಸರ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್ ಮೂಲಕ ಸಾರ್ವಜನಿಕರಿಗೆ ಕರೆ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿದ್ದ 16 ಮಂದಿಯನ್ನು ಎಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಅವರಲ್ಲಿ ನಾಲ್ವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ. ಈ ಎಲ್ಲಾ ಆರೋಪಿಗಳು ಎಚ್‌ಎಸ್‌ಆರ್ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ನಕಲಿ ಬಿಪಿಒ ಕಂಪನಿ ತೆರೆದು ಅಮಾಯಕರನ್ನು ತಮ್ಮ ಸಿಬ್ಬಂದಿ ಮೂಲಕ ಕರೆ ಮಾಡಿಸಿ ವಂಚಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಇನ್ಸ್ಪೆಕ್ಟರ್ ಹರೀಶ್ ಕುಮಾರ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು 16 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೆ, ಕಚೇರಿಯಲ್ಲಿದ್ದ 40ಕ್ಕಿಂತ ಹೆಚ್ಚು ಕಂಪ್ಯೂಟರ್ ಮತ್ತಿತರ ಉಪಕರಣಗಳನ್ನ ವಶಕ್ಕೆ ಪಡೆದಿದ್ದಾರೆ.ಈಗ ತನಿಖೆಯನ್ನು ಆಗ್ನೆಯ ವಿಭಾಗ ಸೈಬರ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿದೆ.
ವಂಚಕರು ಕಳೆದ 2 ವರ್ಷಗಳ ಹಿಂದೆ ಸೈಬಿಟ್ಸ್ ಸಲ್ಯೂಷನ್ ಪ್ರವೇಟ್ ಲಿಮಿಡೆಟ್ ಹೆಸರಿನಲ್ಲಿ ಬಿಪಿಒ ಕಂಪನಿ ತೆರೆದಿದ್ದರು. ಕಟ್ಟಡದ 2 ಮಹಡಿಗಳಲ್ಲಿ ಒಟ್ಟು 20 ರಿಂದ 25 ಮಂದಿ ನೌಕರರು ಕೆಲಸ ಮಾಡುತ್ತಿದ್ದರು.
ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಆನ್‌ಲೈನ್‌ನಲ್ಲಿ ಕೆಲಸವೆಂದು ಹೇಳಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡು ಸಾರ್ವಜನಿಕರಿಗೆ ಹೇಗೆ ವಂಚಿಸಬೇಕೆಂದು ತರಬೇತಿ ನೀಡುತ್ತಿದ್ದರು. ನಂತರ ಯುಎಸ್‌ಎ ಮತ್ತಿತರ ದೇಶಗಳ ಪ್ರಜೆಗಳಿಗೆ ರಾತ್ರಿ ವೇಳೆ ಪೊಲೀಸರು ಸೇರಿ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಮಾದಕ ವಸ್ತು ಮಾರಾಟ ಹಾಗೂ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ, ಡಿಜಿಟಲ್ ಅರೆಸ್ಟ್ ಮಾಡುವುದಾಗಿ ನಂಬಿಸಿ ವಂಚಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹಣ ವಸೂಲು ಮಾಡುತ್ತಿದ್ದರು,ಖಚಿತ ಮಾಹಿತಿ ಆಧರಿಸಿ ಕಂಪನಿ ಮೇಲೆ ದಾಳಿ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.