ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ರಾಜ್ಯಮಟ್ಟದ ವಸ್ತುಪ್ರದರ್ಶನಕ್ಕೆ ಚಾಲನೆ

ಧರ್ಮಸ್ಥಳ: ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಜತೆಗೆ ರಾಜ್ಯಮಟ್ಟದ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು,
ರಾಜ್ಯದ ಮೂಲೆ,ಮೂಲೆಗಳಿಂದ ಜನಸಾಗರವೇ ಹರಿದು ಬಂದಿದೆ.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಶನಿವಾರದಿಂದಲೇ ಮೇಳೈಸಿವೆ.

ಶ್ರೀ ಮಂಜುನಾಥೇಶ್ವರ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆಯೊಂದಿಗೆ ಪುಸ್ತಕ ಮಳಿಗೆಗಳು, ಆರೋಗ್ಯ, ಶಿಕ್ಷಣ, ಕೃಷಿ, ವಾಣಿಜ್ಯ, ಜೀವವಿಮೆ, ಸರ್ಕಾರದ ವಿವಿಧ ಇಲಾಖಾ ಮಳಿಗೆಗಳು, ಅಂಚೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮೀಣ ಕರಕುಶಲ ಕೈಗಾರಿಕೆಗಳು,ವಿವಿಧ‌ ವಸ್ತುಗಳ ಮಳಿಗೆಗಳು, ಆಯುರ್ವೇದ ಔಷಧಿ ಮಳಿಗೆಗಳು, ಪೂಜಾ ಸಾಮಾಗ್ರಿಗಳು, ಸಿರಿಧಾನ್ಯಗಳು, ಅಡಿಕೆ ಹಾಳೆತಟ್ಟೆ ತಯಾರಿ, ಸೇರಿದಂತೆ ೩೫೦ಕ್ಕೂ ಹೆಚ್ಚು ಮಳಿಗೆಗಳು ಪ್ರೇಕ್ಷಕರ ಮನಸೆಳೆದಿವೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಎಲ್ಲಾ ಮಳಿಗೆಗಳಿಗೂ ಭೇಟಿ ನೀಡಿ ಶುಭ ಹಾರೈಸಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿಇಒ ಜನಾರ್ದನ ಕೆ.ಎನ್., ಎಸ್.ಡಿ.ಎಂ. ಕಾಲೇಜಿನ ಡಾ. ಶ್ರೀಧರ ಭಟ್, ಪಿ. ಜಿನರಾಜ ಆರಿಗ‌ ಮತ್ತಿತರರು ಉಪಸ್ಥಿತರಿದ್ದರು.

ನ. ೨೦ರ ವರೆಗೆ ಪ್ರತಿ ದಿನ ಬೆಳಿಗ್ಗೆ ಒಂಭತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆ ವರೆಗೆ ವಸ್ತುಪ್ರದರ್ಶನಕ್ಕೆ ಉಚಿತ ಪ್ರವೇಶಾವಕಾಶವಿದೆ.