ಮೈಸೂರು: ನಾಡಿನ ಧಾರ್ಮಿಕ ಶಕ್ತಿ ಕೇಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ವ್ಯಕ್ತಿಗಳು ಹಾಗೂ ದುಷ್ಟ ಶಕ್ತಿಗಳ ವಿರುದ್ಧ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ವಿವಿಧ ಸಂಘಟನೆಗಳವರು ಪ್ರತಿಭಟನೆ ನಡೆಸಿದರು.
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಭಕ್ತರನ್ನು ಕೆರಳಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ, ಶವ ಸಂಸ್ಕಾರ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಪ್ರತಿಭಟನೆ ವೇಳೆ ತೇಜೇಶ್ ಲೋಕೇಶ್ ಗೌಡ ಹೇಳಿದರು.

ಪ್ರಪಂಚದಲ್ಲಿ ಎಷ್ಟೇ ದೊಡ್ಡ ದೊಡ್ಡ ಮಸೀದಿ ಚರ್ಚ್ ಗಳು ಇದ್ದರೂ, ಹಸಿದವರಿಗೆ ಅನ್ನ ನೀಡುವುದು ಹಿಂದೂ ಮಠಗಳು ಮತ್ತು ದೇವಸ್ಥಾನಗಳು ಮಾತ್ರ.ಪ್ರತಿದಿನ ಲಕ್ಷಾಂತರ ಭಕ್ತರಿಗೆ ಅನ್ನ ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಪ್ಪು ಚುಕ್ಕೆ ತರಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಭಕ್ತರು ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಕೆಲವರು ಸ್ನಾನ ಮಾಡುವಾಗ ನೇತ್ರಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತರಾಗಿ ರಬಹುದು.ಕೆಲವರು ಜೀವನದಲ್ಲಿ ಜಿಗುಪ್ಸೆಗೊಂಡು, ಇನ್ನೂ ಕೆಲವರು ಇಲ್ಲಿ ಸತ್ತರೆ ಮುಕ್ತಿ ಸಿಗತ್ತದೆಂದು ಆತ್ಮಹತ್ಯೆ, ಅನಾಹುತಗಳನ್ನು ಮಾಡಿಕೊಂಡಿರಬಹುದು. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಅನ್ಯಧರ್ಮೀಯರು, ಅಹಿಷ್ಣುಗಳು, ದುಷ್ಟ ಶಕ್ತಿಗಳು ಶ್ರೀ ಕ್ಷೇತ್ರಕ್ಕೆ, ಧರ್ಮಾಧಿಕಾರಿಗಳಿಗೆ ಕೆಟ್ಟ ಹೆಸರು ತಂದು ನಮ್ಮ ಹಿಂದೂ ಧರ್ಮವನ್ನು, ಧಾರ್ಮಿಕ ಕ್ಷೇತ್ರವನ್ನು ಹಾಳು ಮಾಡಲು ವ್ಯವಸ್ಥಿತ ಸಂಚುಗಳನ್ನು ರೂಪಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಗಂಭೀರ ಆರೋಪ ಮಾಡಿದರು.
ಧರ್ಮಸ್ಥಳದಲ್ಲಿದ್ದ ಈ ಅನಾಮಿಕ ವ್ಯಕ್ತಿಗೆ ಇಷ್ಟು ವರ್ಷಗಳಾದ ಮೇಲೆ ಪಾಪ ಪ್ರಜ್ಞೆ ಮೂಡಿ, ಈಗ ಜಾಗ ತೋರಿಸಲು ಬಂದಿರುವುದು ಅನುಮಾನಾಸ್ಪದವಾಗಿದೆ ಈ ವ್ಯಕ್ತಿ ತೋರಿಸಿರುವ 16-17 ಜಾಗಗಳಲ್ಲಿ, ಎಲ್ಲೂ ಸರಿಯಾಗಿ ಅಸ್ತಿಗಳು ಸಿಗುತ್ತಿಲ್ಲ. ದಿನಕ್ಕೊಂದು ಜಾಗ ತೋರಿಸಿ ಎಸ್ ಐ ಟಿ ಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ. ಜತೆಗೆ ಈಗ ಇಬ್ಬರು ಬಂದು ಅವನು ಆಗ ಹೂತು ಹಾಕಿದ್ದನ್ನು ನೋಡಿದ್ದೇವೆ ಎನ್ನುತ್ತಿರುವುದು ಹಾಸ್ಯಸ್ಪದ. ಏಕೆಂದರೆ ಮುಖ ತೋರಿಸದ, ಮಾಸ್ಕ್ ಹಾಕಿರುವ ಈ ವ್ಯಕ್ತಿಯನ್ನು ಇವರು ಹೇಗೆ ಗುರುತು ಹಿಡಿದರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ರಾಜ್ಯ ಸರ್ಕಾರ ಯಾರೋ ಅನಾಮಿಕ ವ್ಯಕ್ತಿ ಹೇಳಿದ ಎಂದು ಹೇಳಿ ದಿನಕ್ಕೆ 3-4 ಲಕ್ಷ ಸಾರ್ವಜನಿಕರ ತೆರಿಗೆ ಹಣವನ್ನು ಇದಕ್ಕೆ ಪೋಲು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಜತೆಗೆ ಸರ್ಕಾರ ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಒಳಪಡಿಸಿಕೊಳ್ಳಲು ಅವರೊಂದಿಗೆ ಸಂಚು ರೂಪಿಸುತ್ತಿರುವ ಹಾಗಿದೆ. ಈ ಕೂಡಲೇ ಸರ್ಕಾರ ಅನಾಮಿಕ ವ್ಯಕ್ತಿಯನ್ನು ಎಸ್‌ಐಟಿ ವಶಕ್ಕೆ ಪಡೆದುಕೊಂಡು, ಅವನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ನಿಜ ತಿಳಿಯಬೇಕು ಹಾಗೂ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿ, ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಜ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದರು.
ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಮಧುವನ ಚಂದ್ರು, ವರಕೂಡು ಕೃಷ್ಣೇಗೌಡ, ಶಿವಲಿಂಗಯ್ಯ, ನೇಹಾ, ಮಹದೇವಸ್ವಾಮಿ, ಪದ್ಮ, ಹೊನ್ನೇಗೌಡ, ಡಾ. ಶಾಂತರಾಜೇ ಅರಸ್, ನಾರಾಯಣ ಗೌಡ, ಹನುಮಂತಯ್ಯ, ರಾಧಾಕೃಷ್ಣ, ನಾಗರಾಜು, ಸುಬ್ಬೇಗೌಡ, ರಘು ಅರಸ್, ನಂದಕುಮಾರ್ , ಅಶೋಕ್, ಬಸವರಾಜು, ಕುಮಾರ್, ಗೀತಾ ಗೌಡ, ಎಳನೀರು ರಾಮಣ್ಣ, ದರ್ಶನ್ ಗೌಡ, ಪ್ರದೀಪ್, ಆನಂದ್ ಗೌಡ, ಭಾನುಪ್ರಕಾಶ್, ಶಿವನಾಯಕ್, ರವಿ ನಾಯಕ್, ರವೀಶ್, ಸ್ವಾಮಿ ಗೌಡ, ಪ್ರಭಾಕರ್, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.