ಧರ್ಮಸ್ಥಳ ಶವಗಳ ಹೊರತೆಗೆಯುವ ಕಾರ್ಯ ಪ್ರಾರಂಭ

Spread the love

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದ್ದು,
ಶವಗಳನ್ನು ಹೊರತೆಗೆಯುವ ಕಾರ್ಯ ಪ್ರಾರಂಭಿಸಲಾಗಿದೆ.

ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ ಈಗ 13 ಸ್ಥಳಗಳನ್ನ ಗುರುತಿಸಿದ್ದು, ಇಂದಿನಿಂದ ಶವಗಳನ್ನು ಹೊರತೆಯುವ ಕಾರ್ಯ ಶುರುವಾಗಿದೆ.

ಸೋಮವಾರ‌ ಮೊದಲು ಗುರುತು ಮಾಡಿದ್ದ ಸ್ಥಳದಿಂದಲೇ ಸಮಾಧಿ ಅಗೆಯುವ ಕೆಲಸಕ್ಕೆ ಎಸ್‌ಐಟಿ ಮುಂದಾಗಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿಯಿಂದ 12 ಕಾರ್ಮಿಕರನ್ನು ನಿಯೋಜನೆ ಮಾಡಿಕೊಂಡಿದೆ.

ಅಲ್ಲದೇ ಧರ್ಮಸ್ಥಳ ಗ್ರಾಪಂ ನಿಂದ ಉತ್ಖನನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸ್ಟೆಲ್ಲಾ ವರ್ಗೀಸ್, ಕಂದಾಯ ಇಲಾಖೆ ಇತರ ಸಿಬ್ಬಂದಿಗಳೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

12 ಕಾರ್ಮಿಕರ ತಂಡ ಹಾರೆ, ಪಿಕಾಸಿ, ಗುದ್ದಲಿ ಜೊತೆಗೆ ಸಮಾಧಿ ಅಗೆಯಲು ಬೇಕಾದ ಎಲ್ಲ ಸಾಮಗ್ರಿಗಳನ್ನು ಸಜ್ಜುಗೊಳಿಸಿ, ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ.

ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಹಗಲು ರಾತ್ರಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದೆ, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ.