ಅಹಿಂಸಾಪಾಲಕರಾದ ಜೈನರು ತೊಂದರೆ ಕೊಡಲ್ಲ,ಕೊಟ್ಟವರನ್ನು ಬಿಡಲ್ಲ-ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ

Spread the love

ಬೆಳ್ತಂಗಡಿ: ಸತ್ಯ ಮತ್ತು ಅಹಿಂಸಾ ಪರಿಪಾಲಕರಾದ ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ತೊಂದರೆ ಕೊಟ್ಟವರನ್ನು ನಾವು ಬಿಡುವುದಿಲ್ಲ ಎಂದು ತಮಿಳುನಾಡು ಅರಹಂತಗಿರಿ ಜೈನಮಠದ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದಲ್ಲಿ ಎಲ್ಲಾ ಜೈನಮಠಗಳ ಭಟ್ಟಾರಕರುಗಳ ನೇತೃತ್ವದಲ್ಲಿ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದರು.

ಸತ್ಯಮೇವ ಜಯತೇ ಎನ್ನುವಂತೆ ಸತ್ಯಕ್ಕೆ ಸದಾ ಜಯವಿದೆ. ಸತ್ಯಕ್ಕೆ ಎಂದೂ ಸಾವಿಲ್ಲ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಶೋಭೆ ಮತ್ತು ಕೀರ್ತಿಗೆ ಎಂದೂ ಚ್ಯುತಿ ಬಾರದು ಎಂದು ಹೇಳಿದರು.

ಶುಕ್ರವಾರ ಎಲ್ಲಾ ಭಟ್ಟಾರಕರುಗಳು ದೇವಸ್ಥಾನಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹೊರಗೆ ಬರುವಾಗ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಘಂಟೆ ಬಾರಿಸಿತು. ಇದರಿಂದಾಗಿ ಸಣ್ಣ ಕಳಂಕ ಮಾಯವಾಯಿತು ಎಂದು ತಮಗೆ ತಿಳಿಯಿತು ಎಂದು ಸ್ವಾಮೀಜಿ ನುಡಿದರು.

ರಾಮಚಂದ್ರ, ಸೀತೆಯ ಹಾಗೆ ಮಹಾಪುರುಷರಿಗೂ ಕಷ್ಟ, ಅಪವಾದ ಬರುತ್ತದೆ. ಹಾಗೆ ಧರ್ಮಸ್ಥಳಕ್ಕೆ ಬಂದ ಸಣ್ಣ ಕಳಂಕ ದೋಷ ಅಲ್ಲ,ಈಗ ಸಣ್ಣ ಕಳಂಕವೂ ನಿವಾರಣೆಯಾಗಿದೆ.

ಧರ್ಮಸ್ಥಳ ಹಾಗೂ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ ಎಲ್ಲಾ ಭಟ್ಟಾರಕರುಗಳು ವಿಧಾನಸಭೆ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಎಚ್ಚರಿಸಿದರು.

ಖ್ಯಾತ ಸಾಹಿತಿ ನಾಡೋಜಾ ಹಂಪ ನಾಗರಾಜಯ್ಯ ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಇಂದ್ರಿಯ ನಿಗ್ರಹ, ತಾಳ್ಮೆ, ಸಂಯಮ, ಗಾಂಭೀರ್ಯ, ಸ್ಥಿತಪ್ರಜ್ಞ ಶಕ್ತಿಯ ಪ್ರತಿಭೆಯನ್ನು ವರ್ಣಿಸಲಸದಳವಾಗಿದೆ ಎಂದು ತಿಳಿಸಿದರು.

ಕನಕಗಿರಿ ಜೈನಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಹೆಗ್ಗಡೆಯವರು ಮಾನವ ಅಲ್ಲ, ದೇವಮಾನವ ಎಂದು ಬಣ್ಣಿಸಿದರು.

ಶ್ರವಣಬೆಲಗೊಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಜೈನಧರ್ಮ ಮತ್ತು ಹಿಂದೂ ಧರ್ಮ ಸಮಗ್ರ ಸಮಾಜದ ಸಂಪರ್ಕ ಸೇತುವಾಗಿದೆ. ಹಿಂದೂಗಳನ್ನು ಮತ್ತು ಜೈನರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ,ದೂರುದಾರನ ಸುಳ್ಳು ಮಾತು ಕೇಳಿ ತೆಗೆಸಿದ ಹೊಂಡಗಳಲ್ಲಿ ಗಿಡಗಳನ್ನಾದರೂ ನೆಡಬೇಕು ಎಂದು ಸಲಹೆ ನೀಡಿದರು.

ಸೋಂದಾ ಮಠದ ಭಟ್ಟಾಕಳಂಕ ಸ್ವಮೀಜಿ,
ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ,
ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ರಾಜಸ್ಥಾನದ ತಿಜಾರ ಮಠದ ಸೌರಭಸೇನ ಭಟ್ಟಾರಕ ಸ್ವಾಮೀಜಿ, ಲಕ್ಕವಳ್ಳಿ ಜೈನಮಠದ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಜೈನಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಜೈನಮಠದ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಜೊತೆ ಸದಾ ತಾವೆಲ್ಲರೂ ಸೇವೆಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಾದ್ರಪದ ಮಾಸದಲ್ಲಿ ದಶಲಕ್ಷಣ ಪರ್ವ ಆಚರಣೆಯ ಶುಭಾವಸರದಲ್ಲಿ ಎಲ್ಲಾ ಮಠಾಧೀಶರುಗಳ ದರ್ಶನ ಭಾಗ್ಯ ಲಭಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ನುಡಿದರು.

ಸತ್ಯ, ಅಹಿಂಸೆ, ತ್ಯಾಗ, ಬ್ರಹ್ಮಚರ್ಯ ಇತ್ಯಾದಿ ದಶಧರ್ಮಗಳನ್ನು ಜೈನರು ನಿತ್ಯವೂ ಪಾಲಿಸುತ್ತಾರೆ. ಇಂತಹ ಪವಿತ್ರಪರ್ವದ ಸಂದರ್ಭದಲ್ಲಿ ಎಲ್ಲಾ ಭಟ್ಟಾರಕರುಗಳು ತಮಗೆ ಹಾಗೂ ಧರ್ಮಸ್ಥಳಕ್ಕೆ ಬೆಂಬಲ ನೀಡಿ, ನಿಮ್ಮ ಜೊತೆ ಸದಾ ಇದ್ದೇವೆ ಎಂದು ಭರವಸೆ ನೀಡಿರುವುದು ತಮಗೆ ಹೆಚ್ಚಿನ ಉತ್ಸಾಹ ಮತ್ತು ಪ್ರೇರಣೆ ನೀಡಿದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.

ತತ್ವ, ಸಿದ್ಧಾಂತ, ಧರ್ಮ ಇರುವುದು ಕೇವಲ ಓದಲು, ಉಪದೇಶಕ್ಕೆ ಮಾತ್ರ ಅಲ್ಲ. ಅದನ್ನು ನಾವು ನಿತ್ಯವೂ ಪಾಲಿಸಬೇಕು. “ಸಮ್ಯಕ್‌ದರ್ಶನ, ಜ್ಞಾನ ಚಾರಿತ್ರಾಣಿ ಮೋಕ್ಷ ಮಾರ್ಗಃ” ಎಂಬುದು ಜೈನ ಧರ್ಮದ ಸಾರವಾಗಿದೆ. ಅಂದರೆ ಸರಿಯಾದ ತತ್ವ ಸಿದ್ಧಾಂತಗಳ ಬಗ್ಯೆ ನಂಬಿಕೆ, ತಿಳುವಳಿಕೆ (ಜ್ಞಾನ) ಮತ್ತು ಆಚರಣೆಯಿಂದ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬುದು ಜೈನ ಸಿದ್ಧಾಂತವಾಗಿದೆ. ಇದರ ಪ್ರತೀಕವಾಗಿ ಮೂರು ಎಳೆಗಳಿರುವ ಜನಿವಾರ (ಯಜ್ಞೋಪವೀತ) ವನ್ನು ಜೈನರು ಧರಿಸುತ್ತಾರೆ. ಇಂತಹ ಸಾತ್ವಿಕ ಹಾಗೂ ನೈತಿಕ ಜೀವನದಿಂದ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.ನಂತರ ಎಲ್ಲಾ ಭಟ್ಟಾರಕರುಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಮಾವೇಶದಲ್ಲಿ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಮತ್ತು ಸೋನಿಯಾ‌ ವರ್ಮ ಉಪಸ್ಥಿತರಿದ್ದರು.