ಬೆಂಗಳೂರು: ಜಾನಪದ ಸಾಯಲು ಒಪ್ಪುವುದಿಲ್ಲ, ಕಾಲಬಂದಂತೆ ಪರಿವರ್ತನೆಗೊಳ್ಳುತ್ತಾ ಮುಂದುವರಿಯುತ್ತದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಬೆಂಗಳೂರಿನ ಯಲಹಂಕ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ಕಚೇರಿ ಬೆಂಗಳೂರು ಹಾಗೂ ಮೈ ಭಾರತ್ ಸಹಯೋಗದಲ್ಲಿ ಏರ್ಪಡಿಸಿದ ಮೈ ಭಾರತ್ ದೇಸಿ ಕ್ರಿಯೆಗಳನ್ನು ಡಾ ಎಸ್ ಬಾಲಾಜಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಸಿ ಕ್ರೀಡೆಗಳನ್ನು ಸರ್ಕಾರಗಳು ಪೋಷಿಸಿ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ, ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಭಾರತ ಸರ್ಕಾರ ಈ ಕಾರ್ಯಕ್ರಮವನ್ನು ಜೀವಂತವಾಗಿ ಉಳಿಸಿರುವುದು ಪ್ರಶಂಸೆಗೆ ಪಾತ್ರ ಎಂದು ತಿಳಿಸಿದರು.

ದೇಶಿ ಕ್ರೀಡೆಗಳಿಂದ ಆರೋಗ್ಯ ಸುಧಾರಿಸುತ್ತದೆ, ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದರಿಂದ ಇದನ್ನು ಯುವ ಜನರು ಅನುಕರಣೆ ಮಾಡಬೇಕೆಂದು ಡಾ.ಜಾನಪದ ಎಸ್ ಬಾಲಾಜಿ ಕರೆ ನೀಡಿದರು.

ಭಾರತ ಸರ್ಕಾರದ ಪ್ರಾಂತ್ಯ ನಿರ್ದೇಶಕ ರಾಷ್ಟ್ರೀಯ ಸೇವಾ ಯೋಜನೆ ಕಾರ್ತಿಕೇಯನ್ ಮಾತನಾಡಿ ಅಂತರಾಷ್ಟ್ರೀಯ ಭಾವೈಕ್ಯತೆ ಶಿಬಿರಗಳಿಂದ ನಾವೆಲ್ಲ ಒಂದೇ ಎಂಬ ಭಾವನೆ ಮೂಡುತ್ತದೆ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದು ಬಹಳ ಮುಖ್ಯ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ಯುವ ಅಧಿಕಾರಿ ಉಪ್ಪಿನ್ ಮಾತನಾಡಿ ದೇಸಿ ಕ್ರೀಡೆಗಳನ್ನ ಜಾನಪದಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಎಸ್ ಬಾಲಾಜಿ ಅವರು ಉದ್ಘಾಟಿಸಿರುವುದು ಅರ್ಥಪೂರ್ಣ ಹಾಗೂ ಇವರು ಮಾಡುತ್ತಿರುವ ಕಾರ್ಯಕ್ಕೆ ನೊಬೆಲ್ ಪ್ರಶಸ್ತಿ ಸಹ ನೀಡಬಹುದು ಎಂದು ತಿಳಿಸಿದರು.
ದೇಸೀ ಕ್ರೀಡೆಗಳಾದ ಹಗ್ಗ ಜಗ್ಗಾಟ, ಲಗೋರಿ, ಗಿಲ್ಲಿ ದಾಂಡ್ಲು, ಕುಂಟೆಬಿಲ್ಲೆ ಮುಂತಾದ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ಸೇವಾ ಯೋಜನೆಯ 11 ರಾಜ್ಯದ ಅಧಿಕಾರಿಗಳು, 250ಕ್ಕೂ ಹೆಚ್ಚು ಸ್ವಯಂಸೇವಕರು, ಶೇಷಾದ್ರಿ ಪುರಂ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ನವೀನ್ ಮತ್ತಿತರರು ಉಪಸ್ಥಿತರಿದ್ದರು.