ಮೈಸೂರು,ಆ.2: ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಕಾನೂನಿನಡಿಯಲ್ಲಿ ನಿಗಧಿತ ಅವಧಿಯೊಳಗೆ ಮಾಡಿಕೊಡಬೇಕು,ಜನರನ್ನು ಕಚೇರಿಗೆ ಅಲೆಸಬಾರದು ಎಂದು ಉಪ ಲೋಕಾಯುಕ್ತ ಕೆ ಎನ್ ಫಣೀಂದ್ರ ಅವರು ಸೂಚಿಸಿದರು.
ಶನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 3 ದಿನದ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ದೂರುದಾರರು ಮತ್ತು ಎದುರುದಾರರ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಸಿವಿಲ್ ಕೋರ್ಟ್ ನಲ್ಲಿ ಇಂಜೆಕ್ಷನ್ ಆದೇಶ ಆಗಿದೆ ಆದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೈಟ್ ಖಾತೆ ಮಾಡಿಕೊಟ್ಟಿಲ್ಲ ಎಂದು ದೂರು ನೀಡಿದ್ದಾರೆ. ಇದಕ್ಕೆ ಪಿಡಿಒ ಅವರು ಪತ್ರದಲ್ಲಿ ಇರುವಷ್ಟು ಜಾಗ ಇಲ್ಲ ಹಾಗೂ ಇದು ಆನ್ ರಿಜಿಸ್ಟರ್ ದಾಖಲೆ ಆಗಿದೆ ಆದ್ದರಿಂದ ಖಾತೆ ಮಾಡಲು ಬರುವುದಿಲ್ಲ ಎಂದು ಮಾಹಿತಿ ನೀಡಿದರು.
ದೂರುದಾರರು ಹೂಟಗಳ್ಳಿ ನಗರಸಭೆಯಲ್ಲಿ ಸಿವಿಲ್ ಕಾಮಗಾರಿ ಮಾಡಿದ್ದು, ಕಾಮಗಾರಿ ಮುಗಿದು ನಿಗದಿತ ಅವಧಿ ಮುಗಿದ ನಂತರವೂ ಇಎಂಡಿ ಹಣ ನೀಡಿಲ್ಲ, ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ಇಎಂಡಿ ಹಣ ನೀಡಿದ್ದಾರೆ. ಆದರೆ ವಿಳಂಬವಾಗಿರುವುದಕ್ಕೆ ಬಡ್ಡಿ ನೀಡಿಲ್ಲ ಎಂದು ದೂರು ನೀಡಿದರು. ಇದಕ್ಕೆ ಉಪ ಲೋಕಾಯುಕ್ತರು ಬಡ್ಡಿ ಹಣಕ್ಕೆ ಕೋರ್ಟ್ ಗೆ ಹೋಗುವಂತೆ ಸಲಹೆ ನೀಡಿದರು.
ದೂರುದಾರರು ನಾನು ಬೋಗಾದಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬಡಾವಣೆಯಲ್ಲಿ ಸೈಟ್ ಖರೀದಿ ಮಾಡಿದ್ದು, 20 ವರ್ಷದಿಂದ ಕಂದಾಯ ಪಾವತಿ ಮಾಡುತ್ತಾ ಬಂದಿದ್ದೇನೆ. ಅದೇ ಬಡಾವಣೆಯಲ್ಲಿ ಕೆಲವರಿಗೆ ಖಾತೆ ಮಾಡುತ್ತಾರೆ. ಆದರೆ ನನಗೆ ಇದು ಅನಧಿಕೃತ ಬಡಾವಣೆ ಎಂದು ಹೇಳಿ 11 ಹಾಗೂ 11 ಬಿ ಎಂದು ಅಳಲು ತೋಡಿಕೊಂಡರು.
ಅದಕ್ಕೆ ಅಧಿಕಾರಿಗಳು ಪ್ರತಿಕ್ರಿಯಿಸಿ ಬಡಾವಣೆಯಲ್ಲಿ ಪಾರ್ಕ್ ಹಾಗೂ ಸಿ ಎ ನಿವೇಶನಗಳಲ್ಲಿ ಸೈಟ್ ಮಾಡಿ ಅನಧಿಕೃತವಾಗಿ ಮಾರಾಟ ಮಾಡಿರುತ್ತಾರೆ. ಈ ಸಂಬಂಧ ಹೈ ಕೋರ್ಟ್ ನಲ್ಲಿ ಕೇಸ್ ಇದೆ ಎಂದು ಮಾಹಿತಿ ನೀಡಿದರು, ಇದಕ್ಕೆ ಉಪ ಲೋಕಾಯುಕ್ತರು ಅನಧಿಕೃತ ಬಡಾವಣೆ ಮಾಡಿರುವ ಡೆವಲಪರ್ಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ. ಅನದಿಕೃತವಾಗಿ ಸೈಟುಗಳನ್ನು ಮಾಡಿ ಕೋಟ್ಯಂತರ ರೂಪಾಯಿ ಹಣ ಮಾಡಿಕೊಂಡು ಹೋಗುವವರ ಮೇಲೆ ಸೂಕ್ತ ಕಾನೂನಡಿ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಲೋಕಾಯುಕ್ತ ಜಂಟಿ ನಿಬಂಧಕರು(ವಿಚಾರಣೆ) ವಿ.ಎನ್.ವಿಮಲಾ, ಲೋಕಾಯುಕ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಮರ್ ನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.