ಮೈಸೂರು ಆ.2: ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಶನಿವಾರ ಬೆಳ್ಳಂಬೆಳಿಗ್ಗೆ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯ ಪ್ರತಿ ವಾರ್ಡ್ ಗಳಿಗೂ ಭೇಟಿ ನೀಡಿ ಸರಿಯಾಗಿ ಚಿಕಿತ್ಸೆ ದೊರೆಯುತಿದೆಯೇ, ಶೌಚಾಲಯ,ಊಟದ ವ್ಯವಸ್ಥೆ ಸರಿಯಾಗಿದೆಯೇ ಎಂದು ರೋಗಿಗಳಿಂದ ಮಾಹಿತಿ ಪಡೆದರು.
ಎಕ್ಸರೇ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಹಾಗೂ ವೈದ್ಯರ ಚಿಕಿತ್ಸೆ ಬಗ್ಗೆಯೂ ವಿಚಾರಿಸಿದರು.
ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ, ಶೌಚಾಲಯ ಹಾಗೂ ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಉಪ ಲೋಕಾಯುಕ್ತರು ಖುದ್ಧಾಗಿ ವೀಕ್ಷಣೆ ಮಾಡಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸೌಜನ್ಯವಾಗಿ ವರ್ತಿಸಬೇಕು ಎಂದು ಸಿಬ್ಬಂದಿಗೆ ಸಲಹೆ ನೀಡಿದರು.
ಆಸ್ಪತ್ರೆಯ ಅವ್ಯವಸ್ಥೆಗಳನ್ನು ಪರಿಶೀಲಿಸಿ,ರೋಗಿಗಳ ದೂರುಗಳನ್ನು ಆಲಿಸಿದರು, ಹಣಕ್ಕೆ ಬೇಡಿಕೆಯಿಡುವುದು, ಸ್ವಚ್ಛತೆಯ ಕೊರತೆ, ಮತ್ತು ಡಿ ಗ್ರೂಪ್ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮನಗೊಂಡು ತಾವು ಮತ್ತೆ ಭೇಡಿ ನೀಡುವಷ್ಟರಲ್ಲಿ ಎಲ್ಲವೂ ಸರಿಯಾಗಿರಬೇಕೆಂದು ತಾಕೀತು ಮಾಡಿದರು.
ರೋಗಿಗಳಿಂದ ಅಹವಾಲು ಸ್ವೀಕರಿಸಿದ ಉಪ ಲೋಕಾಯುಕ್ತರು ರೋಗಿಗಳಿಂದ ಚಿಕಿತ್ಸೆಗಾಗಿ ದುಡ್ಡು ಸ್ವೀಕರಿಸಿದರೆ ಅಂತವರ ಮೇಲೆ ಮುಲಾಜಿಲ್ಲದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ನಾಯಿ ಇರುವುದನ್ನು ಕಂಡು ಏನಿದು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕೆಲವರು ರೋಗಿಗಳಿಂದ ಹಣ ಪಡೆದ ಬಗ್ಗೆ ಈ ವೇಳೆ ಸ್ಥಳದಲ್ಲಿದ್ದ ಮೈಸೂರು ಮೆಡಿಕಲ್ ಕಾಲೇಜು ಡೀನ್ ಹಾಗೂ ನಿರ್ದೇಶಕರಾದ ದಾಕ್ಷಾಯಿಣಿ ಅವರನ್ನು ಪ್ರಶ್ನಿಸಿ ಫಣೀಂದ್ರ ಅವರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್,ಆರ್‌ಎಂಒ ಡಾ. ನಯಾಜ್ ಪಾಷಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.