ಬೆಂಗಳೂರು: ರಾಜ್ಯದಲ್ಲಿನ ಬ್ಯಾಟರಿ ಆಧಾರಿತ ಆಟೋರಿಕ್ಷಾಗಳಿಗೆ ತಮಿಳುನಾಡು ಹಾಗೂ ದೆಹಲಿ ಸರ್ಕಾರಗಳ ಮಾದರಿಯಲ್ಲಿ ಕೂಡಲೇ ಉಚಿತ ಪರವಾನಗಿ ನೀಡಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಂದ್ರು ಈ ಬಗ್ಗೆ ಪತ್ರ ಬರೆದಿದ್ದಾರೆ.
ಅನವಶ್ಯಕವಾಗಿ ಆಟೋ ಮೀಟರ್ ಬೆಲೆಗಳನ್ನು ಏರಿಸಿ ಗ್ರಾಹಕರಿಗೆ ಅನವಶ್ಯಕವಾಗಿ ಹೊರೆ ಮಾಡುವ ಅವಶ್ಯಕತೆಯೇ ಇರುವುದಿಲ್ಲವೆಂದು ಸಲಹೆ ನೀಡಿದ್ದಾರೆ
ಕರ್ನಾಟಕ ರಾಜ್ಯದಲ್ಲಿನ ಹಲವು ನಗರಗಳಲ್ಲಿ ಮೀಟರ್ ಆಧಾರದಲ್ಲಿ ಓಡಾಡುತ್ತಿರುವ ಬ್ಯಾಟರಿ ಚಾಲಿತ ಆಟೋರಿಕ್ಷಾ ಗಳು ರಾಜ್ಯದ ಸಾರಿಗೆ ಇಲಾಖೆಯ ಯಾವುದೇ ಕಾನೂನು ಕಟ್ಟಳೆಗಳಿಗೆ ಒಳಪಟ್ಟಿಲ್ಲ, ಮೆಥನಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುತ್ತಿರುವ ಪಾರಂಪರಿಕ ಆಟೋರಿಕ್ಷಾಗಳ ಚಾಲಕರುಗಳ ಆದಾಯದಲ್ಲಿ ವ್ಯತ್ಯಯ ಉಂಟಾಗಿ ಆರ್ಥಿಕವಾಗಿ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಯಾವುದೇ ಸಾರಿಗೆ ನಿಯಮಾವಳಿಗಳ ಅಂಕುಶವಿಲ್ಲದ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ರಸ್ತೆಗಳಿದಿರುವ ಪರಿಣಾಮ ಇಂದು ಸರ್ಕಾರದ ಸಾರಿಗೆ ನಿಯಮಾವಳಿಗಳ ಪ್ರಕಾರ ಪರವಾನಗಿ ತೆಗೆದುಕೊಂಡು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿರುವ ಲಕ್ಷಾಂತರ ಬಡ ಆಟೋರಿಕ್ಷಾ ಚಾಲಕರುಗಳು ತಮ್ಮ ಸಂಸಾರವನ್ನು ನಿರ್ವಹಿಸಲೂ ಸಾಧ್ಯವಾಗದ ಸಂಕಷ್ಟ ಪರಿಸ್ಥಿತಿಗೆ ಧೂಡಲ್ಪಟ್ಟಿದ್ದಾರೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಕದ ತಮಿಳುನಾಡು ಹಾಗೂ ದೆಹಲಿ ರಾಜ್ಯಗಳಲ್ಲಿ ಬ್ಯಾಟರಿ ಆಧಾರಿತ ಆಟೋರಿಕ್ಷಾ ಗಳಿಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಿ ಎರಡೂ ವರ್ಗಗಳ ಆಟೋರಿಕ್ಷ ಚಾಲಕರಗಳು ಸುಭಿಕ್ಷವಾಗಿ ಜೀವನವನ್ನು ನಡೆಸಿಕೊಂಡು ಹೋಗುವ ವಾತಾವರಣವನ್ನು ಕಲ್ಪಿಸಿ ಕೊಟ್ಟಿದ್ದಾರೆ. ರಾಜ್ಯದಲ್ಲಿಯೂ ಕೂಡಲೇ ಇದೇ ರೀತಿಯ ನಿಯಮಾವಳಿಗಳನ್ನು ಅಳವಡಿಸುವ ಮೂಲಕ ಲಕ್ಷಾಂತರ ಆಟೋ ಚಾಲಕರು ಆರ್ಥಿಕ ಸಂಕಷ್ಟದಿಂದ ಹೊರಬರುವಂತಹ ವಾತಾವರಣ ಕಲ್ಪಿಸಿ ಕೊಡಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪಕ್ಷದ ಆಟೋ ಘಟಕದ ರಾಜ್ಯಾಧ್ಯಕ್ಷ ಅಯುಬ್ ಖಾನ್ ಇನ್ನಿತರ ಆಟೋ ಸಂಘಟನೆಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಮನವಿ ಪತ್ರವನ್ನು ಸಲ್ಲಿಸಿದರು.
