ಹುಣಸೂರು: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸ್ಥಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಪ್ರತಿಮೆ ಅತ್ಯಂತ ಕೆಟ್ಟದಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಪದಾಧಿಕಾರಿಗಳು ಕಿಡಿಕಾರಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಅವರು ಪ್ರತಿಮೆಯನ್ನು ಕಂಡು ತೀರ ಬೇಸರ ವ್ಯಕ್ತಪಡಿಸಿದ್ದಾರೆ.
ಯಾವುದೇ ಆಂಗಲ್ ನಿಂದ ನೋಡಿದರೂ ಈ ಪ್ರತಿಮೆ ದೇವರಾಜ ಅರಸು ಅವರಿಗೆ ಹೋಲಿಕೆಯೇ ಆಗುವುದಿಲ್ಲ. ಯಾರನ್ನೋ ನೋಡಿದಂತಾಗುತ್ತದೆ, ಅತ್ಯಂತ ಕೆಟ್ಟದಾಗಿ ಕೆತ್ತಲಾಗಿದೆ. ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೆ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನಲ್ಲಿ ಡಿ ದೇವರಾಜ ಅರಸು ಅವರ ಪ್ರತಿಮೆ ಸ್ಥಾಪಿಸಲು ಹಣ ಬಿಡುಗಡೆ ಮಾಡಿದ್ದರು ಎಂಬ ಮಾಹಿತಿ ಇದೆ. ಅದು ಸರಿಯಾದುದೇ ಆಗಿದೆ. ಆದರೆ ಇಂತಹ ಕೆಟ್ಟ ವಿಗ್ರಹವನ್ನು ಏಕೆ ಮಾಡಬೇಕಿತ್ತು ಈ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಹುಣಸೂರಿನಲ್ಲಿ ಸ್ಥಾಪಿಸಲಾಗಿರುವ ಡಿ ದೇವರಾಜ ಅರಸು ಅವರ ಪ್ರತಿಮೆಯನ್ನು ನೋಡಿ ಬನ್ನಿ ಅದು ಅರಸರೆ ಎದ್ದು ಬಂದಂತೆ ಕಾಣುತ್ತಿದೆ, ಆ ರೀತಿಯ ಪ್ರತಿಮೆ ಸ್ಥಾಪಿಸುವುದು ಬಿಟ್ಟು ಇಂತಹ ಕೆಟ್ಟ ಪ್ರತಿಮೆಯನ್ನು ಏಕೆ ಮಾಡಬೇಕಿತ್ತು ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.

ಹೀಗೆ ಸುಖಾಸುಮ್ಮನೆ ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ ಪ್ರತಿಮೆ ಸ್ಥಾಪನೆಗೆ ಸುಮಾರು 60 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ, ಈ ರೀತಿ ಜನರ ತೆರಿಗೆ ಹಣವನ್ನು ಏಕೆ ಪೋಲು ಮಾಡಬೇಕು ಎಂದು ಚೆಲುವರಾಜು ಕಿಡಿ ಕಾರಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗ ಸ್ಥಾಪಿಸಿರುವ ಅರಸು ಅವರ ಪ್ರತಿಮೆಯನ್ನು ಕೂಡಲೇ ತೆಗೆದುಹಾಕಿ ಹೊಸದಾಗಿ ದೇವರಾಜ ಅರಸು ಅವರಿಗೆ ಹೋಲಿಕೆಯಾಗುವಂತಹ ಪ್ರತಿಮೆಯನ್ನೇ ಸ್ಥಾಪನೆ ಮಾಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
