ಮೈಸೂರು: ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಹಾಗೂ ಆಷಾಡ ಶುಕ್ರವಾರ ಪೂಜಾ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಡಿ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಆಷಾಡ ಮಾಸದ 4 ಶುಕ್ರವಾರ ಗಳು ಮತ್ತು ಅಮ್ಮನವರ ಜನ್ಮೋತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಆಷಾಡ ಶುಕ್ರವಾರ ಹಾಗೂ ವರ್ಧಂತಿ ದಿನಗಳಂದು ಯಾವುದೇ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ. ವಾಹನಗಳನ್ನು ಲಲಿತ ಮಹಲ್ ಹೊಟೆಲ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ಭಕ್ತಾದಿಗಳಿಗೆ ಸಾರ್ವಜನಿಕ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜೂನ್ 27, ಜುಲೈ 4, ಜುಲೈ 11, ಜುಲೈ 18 ರಂದು ನಾಲ್ಕು ಆಷಾಡ ಶುಕ್ರವಾರಗಳು ಹಾಗೂ ಜುಲೈ 17 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ನಡೆಯಲಿದೆ ಹಾಗಾಗಿ ಭಕ್ತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿ ದರು.
ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಬೇಕು. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಸ್ವಚ್ಚತೆ ಮಾಡಬೇಕು. ಚೆಸ್ಕಾಂ ವತಿಯಿಂದ 1000 ಮೆಟ್ಟಿಲುಗಳ ಬಳಿಯಿರುವ ವಿದ್ಯುತ್ ದೀಪಗಳ ದುರಸ್ಥಿ ಹಾಗೂ ಬೆಟ್ಟದ ದೇವಾಲಯಗಳಿಗೆ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.
ಆಷಾಡ ಶುಕ್ರವಾರ ಹಾಗೂ ಆಷಾಡ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾಮಾನ್ಯ ದರ್ಶನ ಉಚಿತವಾಗಿದ್ದು, ಪ್ರವೇಶ ದರ್ಶನಕ್ಕೆ 50 ರೂ. ಹಾಗೂ ವಿಶೇಷ ದರ್ಶನಕ್ಕೆ 300 ರೂ. ಗಳ ಟಿಕೆಟ್ ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ರಾದ ಶೇಖ್ ತನ್ವೀರ್ ಆಸಿಫ್, ಡಿಸಿಪಿ ಮುತ್ತುರಾಜ್, ಚಾಮುಂಡೇಶ್ವರಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.