ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅರಮನೆ ನಗರಿ ನಮ್ಮ ಮೈಸೂರಿನಲ್ಲಿ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ತಿಳಿಸಿದರು.
ಶುಕ್ರವಾರ ಜಿಲ್ಲಾ ಪಂಚಾಯಿತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ದಸರಾ ಸಿದ್ಧತೆ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯಿಂದಾಗಿ ಕಳೆದ ವರ್ಷ ದಸರಾ ಹಬ್ಬವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಗಿತ್ತು. ಆದರೆ, ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಆಗಿರುವುದರಿಂದ ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಅಲ್ಲದೆ ಈ ಬಾರಿ ದಸರಾದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಿಂಬಿಸುವ ಕಲಾಕೃತಿಗಳು ಹಾಗೂ ಸರ್ಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸ್ಥಬ್ಧ ಚಿತ್ರಗಳು ಪ್ರದರ್ಶನ ಗೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಮಾತನಾಡಿ, ಕಳೆದ ಬಾರಿ ಆಗಿರುವ ನ್ಯೂನತೆಗಳನ್ನು ಈ ಬಾರಿ ಸರಿಪಡಿಸಿಕೊಂಡು ಯಾವುದೇ ಅಡಚಣೆ ಹಾಗೂ ತೊಂದರೆ ಉಂಟಾಗದಂತೆ ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಬೇಕು ಎಂದು ತಿಳಿಸಿದರು.
ಈ ಬಾರಿಯ ವಿಶ್ವ ವಿಖ್ಯಾತ ದಸರಾ
ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಕರ್ನಾಟಕ ಸಂಭ್ರಮ:೫೦, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಿಂಬಿಸುವ ಕಲಾಕೃತಿಗಳನ್ನು ರಚಿಸಬೇಕು,ದಸರಾದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದ ಬಗ್ಗೆ ಎಚ್ಚರಿಕೆ ವಹಿಸಿ, ದಸರಾ ವೀಕ್ಷಿಸಲು ಬಂದಂತಹ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಯಾವುದೇ ರೀತಿಯ ನಿರಾಸೆಯಾಗದಂತೆ
ನೋಡಿಕೊಳ್ಳಬೇಕು. ಉಪಸಮಿತಿಯಲ್ಲಿನ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸಿ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ ಪುಷ್ಪ ಅಮರನಾಥ್,ಸಂಸದ ಸುನಿಲ್ ಬೋಸ್ , ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಪಿ ಶಿವರಾಜು,ಕಮಿಷನರ್ ಸೀಮಾ ಲಾಟ್ಕರ್, ಎಸ್ ಪಿ ವಿಷ್ಣುವರ್ಧನ್, ದಸರಾ 19 ಉಪ ಸಮಿತಿಯಕಾರ್ಯದರ್ಶಿಗಳು,
ಅಧಿಕಾರಿಗಳು ಹಾಜರಿದ್ದರು.