ದಸರಾ ಉತ್ಸವ ಉದ್ಘಾಟನೆಗೆ ಭಾನು ಮುಸ್ತಾಕ್ ಹೆಸರು ಸ್ವಾಗತಿಸಿ ಸಿಹಿ ವಿತರಣೆ

Spread the love

ಮೈಸೂರು: ದಸರಾ ಉತ್ಸವ ಉದ್ಘಾಟನೆಗೆ ಭಾನು ಮುಸ್ತಾಕ್ ಹೆಸರನ್ನು ಸ್ವಾಗತಿಸಿ ಮೈಸೂರಿನಲ್ಲಿ ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಜನರಿಗೆ ಸಿಹಿ ವಿತರಣೆ ಮಾಡಿ ಸಂಭ್ರಮಿಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,
ನಾಡ ಹಬ್ಬವು ನಮ್ಮ ಸಂಸ್ಕೃತಿಯ ಪರಂಪರೆಯ ಪ್ರತಿರೂಪ, ಇಂತಹ ಸಂದರ್ಭಗಳಲ್ಲಿ ಜಾತಿ ಧರ್ಮದ ಭೇದ ಭಾವದ ಬೀಜ ಬಿತ್ತುವ ಬಿಜೆಪಿ ನಿಲುವು ಖಂಡನೀಯ ಎಂದು ಹೇಳಿದರು.

ನಗರದ ಅರಮನೆಯ ಮುಂಭಾಗ ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಿಸಿ
ವಿಶ್ವ ವಿಖ್ಯಾತ 2025ರ ದಸರಾ ಉದ್ಘಾಟನೆ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಭಾನು ಮುಸ್ತಾಕ್ ಅವರಿಗೆ ಸ್ವಾಗತಾರ್ಹ ಎಂದು ಪೋಸ್ಟರ್ ಹಿಡಿದು ಸಿಹಿ ಹಂಚಿ ಸ್ವಾಗತಿಸಿ ಅವರು ಮಾತನಾಡಿದರು.

ನಾಡಹಬ್ಬ ದಸರಾ ಉತ್ಸವಕ್ಕೆ ಬಾನು ಮುಸ್ತಾಕ್ ಅವರನ್ನು ಸರ್ಕಾರ ಆಹ್ವಾನಿಸಿರುವುದು ಹಾಗೂ ಅವರು ಅದನ್ನು ಒಪ್ಪಿಕೊಂಡಿರುವುದು ಅತ್ಯಂತ
ಸ್ವಾಗತಾರ್ಹ ಎಂದು ಹೇಳಿದರು.

ಭಾನು ಮುಸ್ತಾಕ್ ಅವರು ಜಾಗತಿಕ ಮಟ್ಟದಲ್ಲಿ ಬೂಕರ್ ಪ್ರಶಸ್ತಿ ಗಳಿಸಿ, ಕರ್ನಾಟಕದ ಗೌರವವನ್ನು ಜಗತ್ತಿನ ವೇದಿಕೆಯಲ್ಲಿ ಎತ್ತಿ ಹಿಡಿದಿದ್ದಾರೆ, ಆದರೂ ಬಿಜೆಪಿ ಯಾವತ್ತೂ ಶಾಂತಿ ಸೌಹಾರ್ದತೆ ಬಯಸದೆ, ಅನವಶ್ಯಕ ಧಾರ್ಮಿಕ ವಿಷಯಗಳನ್ನು ಎಳೆದು ತಂದು ಒಂದು ಸಮುದಾಯಕ್ಕೆ ಅವಮಾನ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಬೇಸರದಿಂದ ನುಡಿದರು.

ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ ಆಚಾರಗಳನ್ನು ಪಾಲಿಸುವ ಹಕ್ಕು ಸಂವಿಧಾನದಲ್ಲೇ ಇದೆ, ಈ ಹಿಂದೆ ನಾಡಿನ ಖ್ಯಾತ ಕವಿ ನಿಸಾರ್ ಅಹ್ಮದ್ ಅವರು ದಸರಾ ಉತ್ಸವ ಉದ್ಘಾ ಟಿಸಿದ್ದು ಇವರಿಗೆ ನೆನಪಿಲ್ಲವೆ ಎಂದು ನಜರಬಾದ್ ನಟರಾಜ್ ಪ್ರಶ್ನಿಸಿದರು.

ಬಿಜೆಪಿಗರ ಇಂತಹ ಹೇಳಿಕೆಗಳಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅವಮಾನವಾಗುತ್ತದೆ. ನಾಡಿನಲ್ಲಿ ಮಳೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ಬಡ ಮಕ್ಕಳ ಶಿಕ್ಷಣ, ದಲಿತರು, ಕಾರ್ಮಿಕರು ಹಾಗೂ ಹಿಂದುಳಿದವರ ಸಮಸ್ಯೆಗಳ ಬಗ್ಗೆ ಮೌನವಾಗಿರುವ ಬಿಜೆಪಿ, ಜಾತಿ-ಧರ್ಮದ ರಾಜಕೀಯದ ಸುತ್ತ ಮಾತ್ರ ತಿರುಗಾಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಇದನ್ನು ಸಾರ್ವಜನಿಕರು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ರಾಮಪ್ಪ, ಮೈಸೂರು ನಗರ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಅಭಿ, ದಿನೇಶ್, ಮಹೇಶ್, ಶ್ರೀನಿವಾಸ್, ರಾಜೇಶ್, ರಾಘವೇಂದ್ರ,ಹರೀಶ ನಾಯ್ಡು
ಮತ್ತಿತರರು ಹಾಜರಿದ್ದರು.