ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಶಾಕ್ ನೀಡಿದೆ.
ಗುರುವಾರ ಈ ಕೇಸ್ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ 2024 ಡಿಸೆಂಬರ್‌ನಲ್ಲಿ ಜಾಮೀನು ನೀಡಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಜಾಮೀನು ನೀಡಿದ ನಡೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಎಲ್ಲಾ ಪ್ರಕರಣದಲ್ಲಿಯೂ ಇದೇ ರೀತಿ ಕೊಲೆ ಅಪರಾಧಿಗೆ ಜಾಮೀನು ನೀಡಬಹುದೆ ಎಂದು ಕಟುವಾಗಿ ಪ್ರಶ್ನೆ ಮಾಡಿತ್ತು.
ಆರೋಪಿಗಳಾದ ದರ್ಶನ್ ತೂಗುದೀಪ,
ಪವಿತ್ರಾ ಗೌಡ,ಆರ್ ನಾಗರಾಜು,ಎಂ ಲಕ್ಷ್ಮಣ್,ಅನು ಕುಮಾರ್ ಅಲಿಯಾಸ್ ಅನು,ಜಗದೀಶ್ ಅಲಿಯಾಸ್ ಜಗ್ಗ
ಪ್ರದೋಷ್ ರಾವ್ ಅವರುಗಳು ಮತ್ತೆ ಜೈಲು ಸೇರಬೇಕಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ,ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಹಿಂಪಡೆಯಲಾಗಿದೆ ಎಂದು ಸುಪ್ರೀಂ ಸ್ಪಷ್ಟವಾಗಿ ತಿಳಿಸಿದೆ.
ಜಾಮೀನು ಮಂಜೂರು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು,
ಆರೋಪಿ ಎಷ್ಟೇ ದೊಡ್ಡವರಾಗಿರಲಿ, ಅವರು ಕಾನೂನಿಗಿಂತ ದೊಡ್ಡವರಲ್ಲ, ಯಾರೂ ಕಾನೂನಿಗಿಂತ ಮೇಲಿಲ್ಲ, ಯಾರೂ ಕಾನೂನಿಗಿಂತ ಕೆಳಗಿಲ್ಲ. ನಾವು ಕಾನೂನನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ,ಎಲ್ಲಾ ಸಮಯದಲ್ಲೂ ಕಾನೂನನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದೆ.
ನಟ ದರ್ಶನ್ ಗೆ ಐಶಾರಾಮಿ ಟ್ರೀಟ್‌ಮೆಂಟ್ ಬಗ್ಗೆಯೂ ಸುಪ್ರೀಂ ಕಿಡಿಕಾರಿದೆ.
ಒಂದು ವೇಳೆ ಆರೋಪಿಗಳಿಗೆ ಜೈಲಿನಲ್ಲೇ ರಾಜಾತೀತ್ಯ ನೀಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದರೆ, ನಾವು ತೆಗೆದುಕೊಳ್ಳುವ ಮೊದಲ ಹೆಜ್ಜೆ ಜೈಲಿನ ಅಧೀಕ್ಷಕರು ಮತ್ತು ಸಂಬಂಧಪಟ್ಟ ಇತರ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕಠಿಣವಾಗಿ ಎಚ್ಚರಿಸಿದ್ದಾರೆ.
ದರ್ಶನ್ ಸೇರಿ ಇತರ ಆರೋಪಗಳನ್ನು ವಶಕ್ಕೆ ಪಡೆಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ,ಜತೆಗೆ ಯಾವ ಜೈಲು ಎಂಬುದನ್ನೂ ನಿರ್ಧರಿಸಿದೆ.ಹಾಗಾಗಿ ಯಾವ ಕ್ಷಣದಲ್ಲಾದರೂ ದರ್ಶನ್,ಪವಿತ್ರ ಗೌಡ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆಯಬಹುದು.