ಮೈಸೂರು: ಡಿವಿಜಿಯವರ
ಮೇರು ಕೃತಿಗಳಲ್ಲೊಂದಾದ ಮಂಕುತಿಮ್ಮನ ಕಗ್ಗವು ಆಧುನಿಕ ಭಗವದ್ಗೀತೆಯೆಂದೇ ಜನಪ್ರಿಯವಾಗಿದ್ದು, ಅದರಲ್ಲಿರುವ ಪ್ರತಿಯೊಂದು ಮುಕ್ತಕಗಳೂ ಬದುಕಿಗೆ ದಾರಿದೀಪದಂತಿವೆ ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಹೇಳಿದರು.
ನಗರದ ವಿದ್ಯಾರಣ್ಯಪುರಂನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಉದ್ಯಾನವನದಲ್ಲಿ ಅಪೂರ್ವಸ್ನೇಹ ಬಳಗದ ವತಿಯಿಂದ ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕ ವಿಕ್ಯಾತರಾದ ಕನ್ನಡದ ಆಧುನಿಕ ಸರ್ವಜ್ಞ ಡಿ ವಿ ಗುಂಡಪ್ಪ (
ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) 138 ನೇ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ನೀರು ಹಾಕಿ ಮಾತನಾಡಿದರು.

ಡಿ.ವಿ.ಗುಂಡಪ್ಪನವರು ಮಹಾನ್ ದಾರ್ಶನಿಕರಾಗಿದ್ದರು, ಕವಿ, ಸಾಹಿತಿ, ಪತ್ರಕರ್ತರಾಗಿ ಅವರ ಕೊಡುಗೆಗಳು ಅಪಾರವಾದುದು, ಮಂಕುತಿಮ್ಮನ ಕಗ್ಗವಂತೂ ಅತ್ಯಂತ ಜನಪ್ರಿಯ ಕೃತಿಯಾಗಿದ್ದು, ಇಂದಿಗೂ ಎಲ್ಲೆಲ್ಲೂ ಅದರ ಮುಕ್ತಕಗಳು ಕೇಳಿಬರುತ್ತಿವೆ, ಬದುಕಿಗೆ ಸ್ಫೂರ್ತಿ ತುಂಬುವ ಕಗ್ಗವನ್ನು ಮತ್ತಷ್ಟು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ,ಮಂಕುತಿಮ್ಮನ ಕಗ್ಗ ಕೃತಿಯ ಮೂಲಕ ಜೀವನದ ಮೌಲ್ಯಗಳನ್ನು ಸಾರಿದ ಡಿವಿಜಿಯವರು, ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಜಗದೀಶ್, ಕಾ ಪು ರಾಜಣ್ಣ , ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಮಿರ್ಲೆ ಪನೀಶ್, ಜತ್ತಿ ಪ್ರಸಾದ್, ಶಿವಲಿಂಗ ಸ್ವಾಮಿ, ಪುಟ್ಟಣ್ಣ, ಮಹಾನ್ ಶ್ರೇಯಸ್, ಶಿವು, ಪ್ರಕಾಶ್, ನಿವೃತ್ತ ಶಿಕ್ಷಕರಾದ ಮಹಾದೇವಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.