ಮೈಸೂರು,ಮಾ.6: ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರ ಬಗ್ಗೆ ನಟ್ಟು- ಬೋಲ್ಟು ಪದ ಉಪಯೋಗಿಸಿ ಅವಮಾನಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯ ಎಂದು ಬಿಜೆಪಿ ಕಲೆ ಮತ್ತು ಸಂಸ್ಕೃತಿಕ ಪ್ರಕೋಷ್ಠ ರಾಜ್ಯ ಸಂಚಾಲಕಿ ಡಾ.ರೂಪ ಅಯ್ಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಸಿನಿಮೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ- ನಟಿಯರ ಕುರಿತು ಮಾಡಿದ ಭಾಷಣದ ವೇಳೆ ಕಲಾವಿದರ ನಟ್ಟು- ಬೋಲ್ಟು ಸರಿ ಮಾಡ್ತೇನೆ ಎಂಬ ಅಸಡ್ಡೆ ಹೇಳಿಕೆ ನೀಡಿರುವ ಡಿ.ಕೆ ಶಿವಕುಮಾರ್ ಅವರು ಕೂಡಲೇ ಚಿತ್ರರಂಗದವರ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.
ಚಿತ್ರರಂಗವದವರಿಗೆ ಅವರದ್ದೇ ಅದ ಗೌರವ, ಸ್ಥಾನಮಾನಗಳಿವೆ.ಅದರಲ್ಲೂ ನಟ- ನಟಿಯರು ಸೇರಿದಂತೆ ತಂತ್ರಜ್ಞರು,ಕಲಾವಿದರು ಹೀಗೆ ಸಾವಿರಾರು ಮಂದಿ ಚಿತ್ರರಂಗವನ್ನು ನಂಬಿ ಬದುಕುತ್ತಿದ್ದಾರೆ.
ಆದರೆ ಅಂತವರಿಗೆ ಒಂದು ಸರ್ಕಾರಿ ಆಸ್ಪತ್ರೆಗೆ ಹೋದರೆ ಸೂಕ್ತ ಚಿಕಿತ್ಸೆ ಸಿಗುವುದಿಲ್ಲಾ,ಅಲ್ಲದೇ ಸರ್ಕಾರದ ಸವಲತ್ತುಗಳು ದೊರಕುತ್ತಿಲ್ಲ,
ಹಗಲಿರುಳೆನ್ನದೇ ದುಡಿಯುವ ಚಿತ್ರರಂಗವದ ಬಗ್ಗೆ ಮಾತನಾಡುವ ನೈತಿಕತೆ ಡಿಕೆಶಿ ಅವರಿಗಿಲ್ಲ ಎಂದು ರೂಪಾ ಅಯ್ಯರ್ ಕುಟುಕಿದ್ದಾರೆ.
ಒಂದು ಸಿನಿಮಾ ಮಾಡಬೇಕಾದರೇ ಎಷ್ಟು ಕಷ್ಟಪಡಬೇಕಿದೆ.ಚಿತ್ರಕ್ಕೆ ಸಿಗುವ ಸಬ್ಸಿಡಿಗೆ ವರ್ಷಾನುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಚಿತ್ರಕ್ಕೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆ ಇದೆ ಎಂದು ನೊಂದು ನುಡಿದಿದ್ದಾರೆ.
ಅಣ್ಣಾವ್ರು ಡಾ.ರಾಜ್ ಕುಮಾರ್, ಶಂಕರ್ ನಾಗ್, ಅಂಬರೀಷ್, ವಿಷ್ಣುವರ್ಧನ್ ಅವರುಗಳ ಕಾಲದಿಂದಲೂ ಕನ್ನಡ ಚಿತ್ರರಂಗಕ್ಕೆ,ಕನ್ನಡ ಕಲಾವಿದರಿಗೆ ಅವರದ್ದೇ ಆದ ಸ್ಥಾನ ಮಾನ,ಗೌರವವಿದೆ.ಇದನ್ನು ಅರಿಯದೇ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಚಿತ್ರರಂಗದವರನ್ನು ಅವರ ಪಾಡಿಗೆ ಬಿಡಿ.ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿ ನಿಮ್ಮ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡಿ ಹೊರ ರಾಜ್ಯ, ದೇಶಗಳಿಂದ ಇತರರನ್ನು ಕರೆಸಿ ಹೊಗಳಿ ಸನ್ಮಾನಿಸುವುದನ್ನು ಬಿಟ್ಟು, ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾವಿದರಿಗೆ ಮನ್ನಣೆ ಕೊಟ್ಟು,ಪ್ರೋತ್ಸಾಹಿಸಿ ಅದು ಆಗಿಲ್ಲಾಂದರೆ ಸುಮ್ಮನಿದ್ದುಬಿಡಿ. ಅದನ್ನು ಬಿಟ್ಟು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಕಲಾವಿದರನ್ನು ಅವಮಾನಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿ.ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಕಲಾವಿದರ ಬಗ್ಗೆ ಮಾತನಾಡುವುದು ನಿಜಕ್ಕೂ ಅವರ ಹುದ್ದೆಗೆ ಶೋಭೆ ತರುವಂತದಲ್ಲ.ರಾಜಕೀಯವಾಗಿ ಅವರ ವ್ಯಾಪ್ತಿಯಲ್ಲಿ ಏನು ಬೇಕಾದರೂ ಮಾತನಾಡಿಕೊಳ್ಳಲಿ.ಅದನ್ನು ಬಿಟ್ಟು ಬಹಿರಂಗವಾಗಿ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಅವಮಾನಿಸುವಂತಹ ಹೇಳಿಕೆ ನೀಡುವುದನ್ನು ಈ ಕೂಡಲೇ ನಿಲ್ಲಿಸಲಿ ಎಂದು ರೂಪ ಅಯ್ಯರ್ ಒತ್ತಾಯಿಸಿದ್ದಾರೆ.