ಬೆಂಗಳೂರು: ಚಾಮುಂಡೇಶ್ವರಿ ದೇವಾಲಯ ಹಿಂದೂಗಳ ಆಸ್ತಿ ಅಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ, ಕೂಡಲೇ ಅವರು ಹಿಂದೂಗಳ ಬಳಿ ಕ್ಷಮೆ ಯಾಚಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಅಪಮಾನ ಮಾಡುತ್ತಿದೆ. ಧರ್ಮಸ್ಥಳದಿಂದ ಚಾಮುಂಡೇಶ್ವರಿ ದೇವಾಲಯದವರೆಗೂ ಈ ಕೃತ್ಯ ನಡೆಯುತ್ತಿದೆ ಎಂದು ಕಿಡಿಕಾರಿದರು.
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವುದಾದರೆ, ಅದೇನು ವಕ್ಫ್ ಮಂಡಳಿಯ ಆಸ್ತಿಯೇ ಎಂದು ಪ್ರಶ್ನಿಸಿದರು.
ಮೈಸೂರು ಮಹಾರಾಜರು ಚಾಮುಂಡೇಶ್ವರಿಯನ್ನು ಕುಲದೇವತೆಯಾಗಿ ಪೂಜಿಸಿಕೊಂಡು ಬಂದಿದ್ದಾರೆ. ಇಂತಹ ಇತಿಹಾಸ ಇರುವ ದೇವರನ್ನು ಹಿಂದೂ ದೇವರಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ವಕ್ಫ್ ಮಂಡಳಿ, ಮಸೀದಿ, ಚರ್ಚ್ ಗಳನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ,ಆದರೆ ಹಿಂದೂ ದೇವಾಲಯ ಮಾತ್ರ ಎಲ್ಲರಿಗೂ ಸೇರಿದೆ ಎನ್ನುತ್ತಾರೆ. ಈ ದೇವಾಲಯವನ್ನು ಮುಟ್ಟಿದರೆ ಇಡೀ ರಾಜ್ಯದಲ್ಲಿ ದಂಗೆಯಾಗುತ್ತದೆ ಎಂದು ಅಶೋಕ್ ಎಚ್ಚರಿಸಿದರು.
ದಸರಾ ಹಬ್ಬವನ್ನು ಒಡೆಯರ್ ರಾಜವಂಶಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿಗೆ ಬಂದ ಮುಸ್ಲಿಂ ದೊರೆಗಳು ದೇವಾಲಯಗಳನ್ನು ಒಡೆದುಹಾಕಿದ್ದರು. ಈಗ ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಲಾಗಿದೆ. ಕನ್ನಡ ಭುವನೇಶ್ವರಿ ದೇವಿಯ ಬಗ್ಗೆ ಇವರು ಮಾತಾಡುತ್ತಾರೆ. ಇನ್ನೇನು ಪಾಕಿಸ್ತಾನದ ಮಾತೆ ಮಾಡಬೇಕಿತ್ತೇ ಎಂದು ಕಾರವಾಗಿ ಪ್ರಶ್ನಿಸಿದರು.
ಕವಿ ನಿಸಾರ್ ಅಹ್ಮದ್ ಬಗ್ಗೆ ಯಾರೂ ಮಾತಾಡಲ್ಲ. ನಾನು ಕಂದಾಯ ಸಚಿವನಾಗಿದ್ದಾಗ ಅವರ ಹೆಸರಲ್ಲಿ ಸಂಸ್ಥೆ ನಿರ್ಮಿಸಲು ಐದು ಎಕರೆ ಜಮೀನು ಮಂಜೂರು ಮಾಡಿಸಿದ್ದೆ. ಜೋಗದ ಸಿರಿಯ ಕವನ ಬರೆದು ಅವರು ತಾಯಿ ನಿನಗೆ ನಿತ್ಯೋತ್ಸವ ಎಂದಿದ್ದರು. ಅವರು ಎಂದಿಗೂ ಯಾವುದೇ ಧರ್ಮದ ವಿರುದ್ಧವಾಗಿ ಮಾತಾಡಲಿಲ್ಲ. ಅಂತಹವರಿಗೆ ಬಾನು ಮುಷ್ತಾಕ್ ಅವರನ್ನು ಹೋಲಿಸುವುದೇಕೆ, ನಿಸಾರ್ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ ಎಂದು ಪ್ರತಿಪಕ್ಷ ನಾಯಕ ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಕುರುಬ, ಒಕ್ಕಲಿಗರಲ್ಲಿ ಯಾರೂ ಸಾಧಕರು ಸಿಕ್ಕಲಿಲ್ಲವೇ? ಇನ್ನಾದರೂ ಒಬ್ಬ ಸಾಧಕರು, ಯೋಧರನ್ನು ಗುರುತಿಸಿ ಅವಕಾಶ ನೀಡಲಿ. ಬಾನು ಮುಷ್ತಾಕ್ ಬರೆದ ಎದೆಯ ಹಣತೆಗೆ ಬೂಕರ್ ಪ್ರಶಸ್ತಿಯಲ್ಲಿ ಮತ್ತೊಬ್ಬರ ಪಾಲು ಇದೆ. ಆದರೆ ಅವರನ್ನು ಆಹ್ವಾನಿಸಿಲ್ಲ. ಇದು ಅಲ್ಪಸಂಖ್ಯಾತರ ಸರ್ಕಾರ ಆಗಿರುವುದು ಖಂಡನೀಯ ಎಂದು ಗುಡುಗಿದರು.
ಯದುವೀರರ ವಂಶಸ್ಥರನ್ನು ಟಿಪ್ಪು ಕುಟುಂಬದವರು ಬಂಧನದಲ್ಲಿರಿಸಿದ್ದರು. ಅಂತಹವರನ್ನೇ ಮತ್ತೆ ಕರೆದುಕೊಂಡು ಬಂದು ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ. ಮುಂದೆ ಬಿಜೆಪಿ ಸರ್ಕಾರ ಬಂದ ನಂತರ ಉದ್ಘಾಟನೆ ಮಾಡುವ ಕುರಿತು ಕಾನೂನು ತರಲಾಗುವುದು ಎಂದು ಹೇಳಿದರು.
ಹಿಂದೆ ಘಜನಿ ಮಾಡಿದಂತೆಯೇ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಲು ಮುಂದಾಗಿದೆ. ಮಂಜುನಾಥ ಸ್ವಾಮಿಗೆ ಕೆಟ್ಟ ಹೆಸರು ತರಲು ಎರಡು ವರ್ಷ ತಯಾರಿ ನಡೆಸಲಾಗಿದೆ. ಎಸ್ಐಟಿಗೆ 3-5 ಕೋಟಿ ರೂ. ಖರ್ಚಾಗಿದೆ. ಧರ್ಮವನ್ನು ರಕ್ಷಣೆ ಮಾಡಲು ಸೆಪ್ಟೆಂಬರ್ 1 ರಂದು ಬಿಜೆಪಿ ಸಮಾವೇಶ ಮಾಡಲಿದ್ದೇವೆ ಎಂದು ಅಶೋಕ ತಿಳಿಸಿದರು.