ಡಲ್ ಆದ ಮಕ್ಕಳ ಚಿತ್ತ ಸೆಳೆಯುತ್ತಿದ್ದ ಕಾಟನ್ ಕ್ಯಾಂಡಿ

Spread the love

ಮೈಸೂರು: ಸದಾ ಗಾಢ ಪಿಂಕ್ ಬಣ್ಣದಲ್ಲಿ
ಮಕ್ಕಳ ಚಿತ್ತ ಸೆಳೆಯುತ್ತಿದ್ದ ಕಾಟನ್ ಕ್ಯಾಂಡಿ ಈಗ ಬಣ್ಣ ಕಳೆದುಕೊಂಡು ಪೇಲವವಾಗಿದೆ.

ಇದನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದವರ ಬದುಕು ಕೂಡಾ ಮೂರಾಬಟ್ಟೆಯಾಗಿದೆ.

ಬಾಂಬೆ ಮಿಠಾಯಿ, ಬೊಂಬಾಯಿ ಮಿಠಾಯಿ, ಕಾಟನ್ ಕ್ಯಾಂಡಿ, ಹತ್ತಿ ಬತ್ತಿ ಮುಂತಾದ ಹೆಸರುಗಳಿಂದ ಕರೆಯುವ ಈ ಸಿಹಿತಿಂಡಿಗೆ
ಆರೋಗ್ಯ ದೃಷ್ಟಿಯಿಂದ ಸರ್ಕಾರ ವಿಧಿಸಿದ ಕ್ರಮಗಳಿಂದಾಗಿ ಬಣ್ಣ ಕಳಚಿಹೋಗಿದೆ.

ಬಣ್ಣ ಹಚ್ಚಿ ಬೀದಿಗೆ ಬರುವಂತಿಲ್ಲ,ಬಂದರೆ‌ ಕ್ರಮ ಗ್ಯಾರಂಟಿ,ಆದರೆ ಫೇಮಸ್ ಪಿಂಕ್ ಬಣ್ಣವಿಲ್ಲದಿದ್ದರೆ ಯಾರೂ ಇದರ ಕಡೆ ನೋಡುವುದಿಲ್ಲ.

ಮಕ್ಕಳು ಅಷ್ಟೇ ‌ಏಕೆ ದೊಡ್ಡವರಿಗೂ ಆಕರ್ಷಕ ತಿನಿಸಾದ ಈ ಬಾಂಬೆ ಮಿಠಾಯಿ ಅಥವಾ‌ ಕಾಟನ್ ಕ್ಯಾಂಡಿಯ ರೂಪ ಮಾಸಲಾಗಿ‌ ಆಕರ್ಷಣೆ‌ ಕಳೆದುಕೊಂಡಿದೆ.

ಹಳ್ಳಿಗಳಲ್ಲಿ ಸೈಕಲ್ ಮೇಲೆ ಗಾಜಿನ ಡಬ್ಬಿಗಳಲ್ಲಿ ತುಂಬಿಕೊಂಡು ಬರುತ್ತಿದ್ದ, ಬಾಂಬೆ ಮಿಠಾಯಿ ಅಣ್ಣ ನಾಲ್ಕಾಣೆ, ಎಂಟಾಣೆಗೆ ಒಂದಷ್ಟು ಎಳೆಗಳನ್ನ ಕೈಗಿಡುತ್ತಿದ್ದ, ಅದನ್ನ ಸ್ವಲ್ಪ ಸ್ವಲ್ಪವೇ ಕಿತ್ತುಕೊಂಡು ನಾಲಗೆಯ ಮೇಲೆ ಇಟ್ಟುಕೊಂಡು ಚಪ್ಪರಿಸಿದರೆ ಸಿಗುತಿದ್ದ ಆನಂದ ವರ್ಣಿಸಲು ಸಾಧ್ಯವಿಲ್ಲ.

ಅಂತಹ ತಿನಿಸು ಆಧುನಿಕತೆಯ ಕಾಲಚಕ್ರಕ್ಕೆ ಸಿಲುಕಿ ಡಬ್ಬದಿಂದ ಹೊರಬಂದು ಪ್ಲಾಸ್ಟಿಕ್ ಕವರ್ ನಲ್ಲಿ ಬಂಧಿಯಾಯಿತು.ಪ್ಲಾಸ್ಟಿಕ್ ಕವರ್ ಒಳಗೆ ಬಂಧಿಯಾದರೂ ತನ್ನ ಪವರ್ ಫುಲ್‌ ಬಣ್ಣ ದಿಂದಾಗಿ ಡಿಮ್ಯಾಂಡ್ ಕಡಿಮೆಯಾಗಿರಲಿಲ್ಲ.

ಹಳ್ಳಗಳಷ್ಟೇ ಅಲ್ಲಾ ನಗರದ ಪ್ರಮುಖ ರಸ್ತೆಗಳಲ್ಲೂ ನಿನ್ನೆ,ಮೊನ್ನೆ ತನಕ ಇದರ ವ್ಯಾಪಾರ ಜೋರಾಗಿಯೇ ಇತ್ತು.ನಾಲ್ಕೈದು ಅಡಿ ಎತ್ತರದ ಕೋಲುಗಳಿಗೆ ಈ ಬಣ್ಣದ ಮಿಟಾಯಿ ಕವರುಗಳನ್ನು ಆಕರ್ಷಕವಾಗಿ ಜೋಡಿಸಿ ಎರಡೂ ಕೈಗಳಲ್ಲಿ ಹಿಡಿದು‌ ಹೈ ಬೊಂಬಾಯ್ ಮಿಟಾಯ್ಯಾ ಎಂದು ರಾಗವಾಗಿ ಕೂಗುತ್ತಾ ಸಾಗುತ್ತಿದ್ದರೆ ಮನೆಯೊಳಗಿಂದ ಮಕ್ಕಳು ಮಹಿಳೆಯರು ಓಡೋಡಿ ಬರುತ್ತಿದ್ದರು.

ಆದರೇನು ಮಾಡುವುದು ಬಣ್ಣ ಕಳೆದುಕೊಂಡ ಬೊಂಬಾಯ್ ಮಿಟಾಯ್ ಬಳಿ‌ ಈಗ ಯಾರೂ ಸುಳಿಯುತ್ತಿಲ್ಲ.
ವ್ಯಾಪಾರಗಾರ‌ ದಿಕ್ಕು ಕಾಣದೆ‌ ಕೆನ್ನೆ ಮೇಲೆ‌ ಕೈ ಇಟ್ಟುಕೊಂಡು ದಿಕ್ಕು ತೋಚದೆ ಚಿಂತಿತನಾಗಿ ಅಲ್ಲೆ ಎಲ್ಲೋ ರಸ್ತೆ ಬದಿ ಕುಳಿತು ನೆಲ ನೋಡುತ್ತಾನೆ.

ಮಕ್ಕಳ, ಯುವಜನರ, ಮಹಿಳೆಯರ ನೆಚ್ಚಿನ ತಿನಿಸಾಗಿರುವ ಬಾಂಬೆ ಮಿಠಾಯಿ ಹೊಸ ರೂಪವನ್ನೇನಾದರೂ ಪಡೆದರೆ‌ ತಾನೂ ಉಳಿದು ತನ್ನ ನಂಬಿರುವ ಮಾಲೀಕನನ್ನೂ ಉಳಿಸುತ್ತದೆ. ಇಲ್ಲವೇ ಜನ ಹೊಂದಿಕೊಳ್ಳಬೇಕು ಹಾಗಾದಿದ್ದರೆ ಕ್ಯಾಂಡಿ ಕಾಲಗರ್ಭಕ್ಕೆ ಸೇರಿಬಿಟ್ಟೀತೋ ಏನೊ ಕಾಲವೇ ಉತ್ತರಿಸಬೇಕಿದೆ.