ಮಹಾಮಾರಿ ಕೊರೋನಾ ಮತ್ತೆ ದಾಂಗುಡಿ;ಬೆಂಗಳೂರಿನಲ್ಲಿ ಮೊದಲ ಬಲಿ

Spread the love

ಬೆಂಗಳೂರು: ಇಡೀ ವಿಶ್ವವನ್ನೇ ಬಿಟ್ಟೂಬಿಡದೆ ಕಾಡಿದ್ದ ಮಹಾಮಾರಿ ಕೊರೋನಾ ಪುನಃ ದಾಂಗುಡಿ ಇಡುತ್ತಿದ್ದು ಎಲ್ಲೆಲ್ಲೂ ಆತಂಕ ಪ್ರಾರಂಭವಾಗಿದೆ.

ಇದೀಗ ಕೋವಿಡ್ ಕೊರೊನಾಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಲಿಯಾಗಿದೆ.

ಬೆಂಗಳೂರಿನ ವೈಟ್ ಫೀಲ್ ಮೂಲದ ವೃದ್ದರೊಬ್ಬರು ಮೃತಪಟ್ಟಿದ್ದಾರೆ.ಅವರಿಗೆ 84 ವರ್ಷಗಳಾಗಿತ್ತು.ಅವರು ಉಸಿರಾಟದ ತೊಂದರೆ ಜತೆಗೆ ಇತರೆ ಕಾಯಿಲೆಯಿಂದ ಬಳಲುತ್ತಿದ್ದರು.

ವೃದ್ದರು ಮೇ.17 ರಂದೆ ಮೃತಪಟ್ಟಿದ್ದು,ಕೊರೊನಾ ಹೆಚ್ಚಾಗುತ್ತಿದ್ದು ಇಂದು ಅವರ ಸಾವನ್ನು ದೃಢಪಡಿಸಲಾಗಿದೆ.

ರಾಜ್ಯದಲ್ಲಿ ಇಂದು 108 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ ಐವರಿಗೆ ಕೋವಿಡ್ ಪಾಸಿಟಿವ್ ಬಂದಿದೆ.

ಬೆಂಗಳೂರಲ್ಲಿ 2, ಮೈಸೂರು 2 ಹಾಗೂ ವಿಜಯನಗರದಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ದಾಖಲಾಗಿದೆ.

ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ.

ಬೆಳಗಾವಿ ಜಿಲ್ಲೆಗೆ ಕೊರೋನಾ ಕಾಲಿಟ್ಟಿದ್ದು, 25 ವರ್ಷದ ಗರ್ಭಿಣಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಬೆಳಗಾವಿ ಡಿಎಚ್‌ಒ ಡಾ.ಈಶ್ವರ್ ಗಡಾದಿ ತಿಳಿಸಿದ್ದಾರೆ.

ಇನ್ನು ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 10 ಬೆಡ್‌ಗಳ ವಾರ್ಡ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಜತೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾರ್ವಜನಿಕರು ಆತಂಕಪಡಬಾರದು,ಸ್ವಚ್ಛತೆ ಕಾಪಾಡಿಕೊಳ್ಳಬೇಕು,ಹೊರಗೆ ಬರುವಾಗ ಮಾಸ್ಕ್ ಧರಿಸಬೇಕೆಂದು ಮನವಿ ಮಾಡಿದ್ದಾರೆ.