ಬೆಂಗಳೂರು: ದೇಶದಲ್ಲಿರುವ ಸಂವಿಧಾನ ವಿರೋಧಿ ಮನುವಾದಿಗಳನ್ನು ಗುರುತಿಸಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ – 2025 ಅನ್ನು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ನಮಿಸಿ ನಂತರ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು, ಮನುಸ್ಮೃತಿಯಲ್ಲಿದ್ದ ಮನುಷ್ಯ ವಿರೋಧಿ, ಸಮಾನತೆ ವಿರೋಧಿ ನಿಯಮಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಯಿತು. ಅದಕ್ಕೇ ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸುತ್ತಾರೆ ಎಂದು ಟೀಕಿಸಿದರು.
ಸಮ ಸಮಾಜ ನಿರ್ಮಾಣ, ಅಸಮಾನತೆ ನಿವಾರಣೆ ನಮ್ಮ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು.
ವಿ ದ ಪೀಪಲ್ ಆಫ್ ಇಂಡಿಯಾ
ಎನ್ನುವುದೇ ನಮ್ಮ ಸಂವಿಧಾನದ ಮೂಲ ಮಂತ್ರ ಎಂದು ಸಿಎಂ ಬಣ್ಣಿಸಿದರು.
ಈ ದೇಶದ ಜನತೆಗೆ ಎಂಥಾ ಸಂವಿಧಾನ ಬೇಕು ಎನ್ನುವ ಬಗ್ಗೆ ಒಂದು ವರ್ಷ ಕಾಲ ಸಂವಿಧಾನ ಸಭೆಯಲ್ಲಿ ಸಮಗ್ರ ಚರ್ಚೆ ಬಳಿಕ ಅಂಗೀಕರಿಸಲಾಗಿದೆ.
ಫೆಡರಲ್, ಯೂನಿಟರಿ, ರಿಟರ್ನ್, ಅನ್ ರಿಟರ್ನ್ ಸಂವಿಧಾನಗಳು ವಿಶ್ವದಲ್ಲಿವೆ. ನಮ್ಮದು ಲಿಖಿತ ಸಂವಿಧಾನ. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ ಈ ನೆಲಕ್ಕೆ ಒಪ್ಪಿಗೆಯಾಗುವ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟರು ಎಂದು ಮುಖ್ಯ ಮಂತ್ರಿಗಳು ವಿವರಿಸಿದರು.
ಮನುವಾದಿಗಳು ಸಂವಿಧಾನ ಅಂಬೇಡ್ಕರ್ ಅವರಿಂದ ಆಗಿಲ್ಲ ಎಂದು ವಾದಿಸುತ್ತಾರೆ. ಆದರೆ ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಅಂಬೇಡ್ಕರ್ ಅವರಿಗೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಅಪಾಯಗಳು ಅಂಬೇಡ್ಕರ್ ಅವರಿಗೆ ಅರ್ಥ ಆಗಿತ್ತು. ಅದಕ್ಕೇ ನಮ್ಮ ಸಂವಿಧಾನದಲ್ಲಿ ಮೀಸಲಾತಿಯನ್ನು ಸೇರಿಸಿದರು
ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಸಂವಿಧಾನದ ಆಶಯ ಈಡೇರಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.
ದಲಿತರನ್ನು, ಶೂದ್ರರನ್ನು ಹಿಂದುಳಿದವರನ್ನು, ಮುಸ್ಲೀಮರನ್ನು, ಅಲ್ಪಸಂಖ್ಯಾತರನ್ನು ದ್ವೇಷಿಸಿ ಎಂದು ನಮ್ಮ ಧರ್ಮವೂ ಹೇಳುವುದಿಲ್ಲ,ಇತರೆ ಯಾವ ಧರ್ಮವೂ ಹೇಳುವುದಿಲ್ಲ ಎಂದರು.
ಸಂವಿಧಾನ ಅಂಗೀಕಾರಕ್ಕೆ 285 ಮಂದಿ ಸದಸ್ಯರಲ್ಲಿ 284 ಮಂದಿ ಪೂರ್ತಿ ಸಹಿ ಹಾಕಿದರು. ಒಬ್ಬರು ಮಾತ್ರ ಹಾಕಲಿಲ್ಲ. ಹೀಗಾಗಿ ಬಹುತೇಕ ಎಲ್ಲರಿಗೂ ಒಪ್ಪಿಗೆ ಆಗುವಂತಹ ಸಂವಿಧಾನವನ್ನೇ ಅಂಬೇಡ್ಕರ್ ರಚಿಸಿದರು ಎಂದು ತಿಳಿಸಿದರು.
ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ ಎಂದು ತಿಳಿಸಿದರು.
ತುತ್ತು ಅನ್ನಕ್ಕಾಗಿ ಯಾರೂ ಯಾರ ಮನೆ ಮುಂದೆಯೂ ನಿಲ್ಲಬಾರದು ಎನ್ನುವ ಆಶಯದಿಂದ ಅನ್ನಭಾಗ್ಯ ತಂದೆ, ಯಾರ ಮನೆ ಮಕ್ಕಳೂ ಬರಿಗಾಗಲ್ಲಿ ಶಾಲೆಗೆ ಹೋಗಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ತಂದೆ. ಎಲ್ಲಾ ಭಾಗ್ಯಗಳ ಹಿಂದೆ ಹಾಗೂ ಈಗ ಜಾರಿ ಮಾಡಿರುವ ಐದೂ ಗ್ಯಾರಂಟಿಗಳ ಹಿಂದೆ ಅಸಮಾನತೆ ನಿವಾರಿಸುವ ಮತ್ತು ಸರ್ವರಿಗೂ ಆರ್ಥಿಕ ಶಕ್ತಿ ಬರಲಿ ಎಂಬ ಆಶಯ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಎಂ.ಸಿ.ಸುಧಾಕರ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
