ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿ ಮಾಡಿದಂತೆಯೇ ಕಾಂಗ್ರೆಸ್ ಸರ್ಕಾರ ಜನರ ಮೇಲೆ ತೆರಿಗೆಯ ದಾಳಿ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ನೀತಿ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದ್ದು, ಅದಕ್ಕೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂದಮೇಲೆ ಈ ಹೋರಾಟ ಯಶಸ್ವಿಯಾಗಿದೆ ಎಂದೇ ಅರ್ಥ ಎಂದರು.
ಬೆಂಗಳೂರಿನಲ್ಲಿ ಕಸಕ್ಕೆ, ಪಾರ್ಕಿಂಗ್‌ಗೆ ಶುಲ್ಕ ವಿಧಿಸಿದ್ದಾರೆ. ಇದು ತುಘಲಕ್ ದರ್ಬಾರ್ ಆಗಿದ್ದು, ಯಾರೂ ಕೇಳುವವರಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವೀಲ್‌ಚೇರ್‌ನಲ್ಲಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಬೊಟ್ಟು ಇಟ್ಟುಕೊಂಡು ದೇವಸ್ಥಾನಗಳಲ್ಲಿ ಹೋಮ ಮಾಡಿಸುತ್ತಿದ್ದಾರೆ. ಬೊಟ್ಟು ಇಟ್ಟುಕೊಂಡು ಎಲ್ಲವನ್ನೂ ಮುಸ್ಲಿಮರಿಗೆ ಧಾರೆ ಎರೆಯುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಇಲ್ಲಿ ಆಡಳಿತವನ್ನು ಯಾರೂ ನಡೆಸುತ್ತಿಲ್ಲ. ಅಧಿಕಾರಕ್ಕಾಗಿ ಕಿತ್ತಾಟ ಮಾತ್ರ ನಡೆಯುತ್ತಿದೆ. ಈ ಹಿಂದೆ ಮುಡಾ ಹಗರಣದ ವಿರುದ್ಧ ಪಾದಯಾತ್ರೆ ಮಾಡಿದ್ದಕ್ಕಾಗಿ ಸಚಿವರು ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಸೈಟುಗಳನ್ನು ವಾಪಸ್ ಕೊಟ್ಟರು. ಇವೆಲ್ಲ ನಮ್ಮ ಹೋರಾಟದ ಫಲ ಈಗಲೂ ಹೋರಾಟ ಮಾಡಿ ಫಲಿತಾಂಶ ನೀಡುತ್ತೇವೆ ಎಂದು ಅಶೋಕ್ ತಿಳಿಸಿದರು.
ಭಾರತದ ಸಂಸತ್ತು ಯಾವತ್ತಿಗೂ ಶ್ರೇಷ್ಠವಾದುದು. ಇವರನ್ನು ಕೇಳಿ ಯಾರೂ ವಕ್ಫ್ ಕಾನೂನು ತರುವುದಿಲ್ಲ. ಹಿಂದೆ ಮನಮೋಹನ್ ಸಿಂಗ್ ಅವಧಿಯಲ್ಲಿ ತಂದ ಕಾನೂನಿನಿಂದಾಗಿ ಭೂಮಿ ಕಬಳಿಕೆಯಾಗಿದೆ. ವಕ್ಫ್ ತಿದ್ದುಪಡಿ ಕಾನೂನನ್ನು ಎಲ್ಲರೂ ಪಾಲಿಸಲೇಬೇಕು. ಕಾಂಗ್ರೆಸ್‌ನವರು 50 ಸಲ ಸಂವಿಧಾನ ಬದಲಿಸಿದ್ದಾರೆ. ಅವರಿಂದ ಬಿಜೆಪಿ ಬುದ್ಧಿ ಕಲಿಯಬೇಕಿಲ್ಲ ಎಂದು ತುರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಅತ್ಯಾಚಾರ-ಕೊಲೆ ಮಾಡಿದ ವ್ಯಕ್ತಿ ಕಾನೂನು ರೀತಿಯಲ್ಲಿ ಎನ್‌ಕೌಂಟರ್ ಆಗಿರುವುದು ಉತ್ತಮ. ಇಂತಹ ತಪ್ಪು ಮಾಡಿದವರಿಗೆ ಕಾನೂನು ರೀತಿಯಲ್ಲೇ ಶಿಕ್ಷೆಯಾಗಬೇಕು ಎಂದು ಅಶೋಕ್ ಹೇಳಿದರು.