ಸರಕಾರದ ಪರಿಸ್ಥಿತಿ ಬಹಿರಂಗ;ಸಿಎಂ ರಾಜೀನಾಮೆಗೆ ಹೇಮಾನಂದೀಶ್ ಆಗ್ರಹ

Spread the love

ಮೈಸೂರು: ಸರಕಾರದ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು,
ಬಹಿರಂಗ ಪಡಿಸಿದ್ದಾರೆ ಎಂದು ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾನಂದೀಶ್ ಟೀಕಿಸಿದ್ದಾರೆ.

ಬಸವರಾಜ ರಾಯರಡ್ಡಿ ಅವರು, ರಸ್ತೆ, ಶಾಲೆ, ಅಭಿವೃದ್ಧಿ ಕಾರ್ಯಗಳು ಬೇಕೆಂದರೆ, ಗ್ಯಾರಂಟಿಗಳನ್ನು ಬಿಡಬೇಕು, ನೀವು ಒಪ್ಪಿದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ. ಆ ನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಆಗುತ್ತೆ ಎಂದು ಹೇಳುವ ಮೂಲಕ
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರಕಾರಕ್ಕೆ ಅಭಿವೃದ್ಧಿಗೆ ಹಣ ಇಲ್ಲ ಎಂಬುವುದನ್ನು ಬಹಿರಂಗವಾಗಿ ಹೇಳಿದ್ದಾರೆ. ಅಭಿವೃದ್ಧಿ ಬೇಕೆಂದರೆ ಗ್ಯಾರಂಟಿಗಳನ್ನು ತಿರಸ್ಕರಿಸಿ ಎನ್ನುವ ಮೂಲಕ ಸರಕಾರದ ವಾಸ್ತವತೆಯನ್ನು ತಿಳಿಸಿದ್ದಾರೆ ಎಂದು ಹೇಮಾ ಅವರು ಮಾಧ್ಯಮ ಪ್ರಕಟಣೆ ಮೂಲಕ‌ ವ್ಯಂಗ್ಯವಾಡಿದ್ದಾರೆ.

ಎರಡು ವರ್ಷದ ಹಿಂದೆ ಅಧಿಕಾರಕ್ಕಾಗಿ ಪೂರ್ವಾಪರ ಯೋಚಿಸದೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಜನರಿಗೆ ಆಮಿಷ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಈಗ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ, ಆದರೆ, ಗ್ಯಾರಂಟಿ ನೆಪದಲ್ಲಿ ಪ್ರತಿಯೊಂದರ ಬೆಲೆ ಏರಿಸಿದೆ. ಹಾಲಿನಿಂದ ಆಲ್ಕೋಹಾಲ್ ವರೆಗೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿಸಿ ದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದೆ. ಎಸ್‌ಟಿ ನಿಗಮದಲ್ಲಿ 187 ಕೋಟಿ ರೂ. ಭ್ರಷ್ಟಾಚಾರ, ವಸತಿ ಇಲಾಖೆ, ಅಬಕಾರಿ ಸೇರಿ ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಸರಕಾರ ಜನರಿಗೆ ಗ್ಯಾರಂಟಿ ಯೋಜನೆ ನೀಡಲು ಪರದಾಡುತ್ತಿದೆ,ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೇಮಾ ನಂದೀಶ್ ಆಗ್ರಹಿಸಿದ್ದಾರೆ.