ಹಬ್ಬಗಳ ಆಚರಣೆಯಿಂದ ಸಾಮರಸ್ಯ ಹೆಚ್ಚಳ: ಕೆ ಬಿ ಲಿಂಗರಾಜು

Spread the love

ಮೈಸೂರು: ಸಮೃದ್ಧಿ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಆನ್ಲೈನ್ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಆನ್ಲೈನ್ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಜ್ಯೋತಿ, ವಿಮಲಾ, ವಿಜಯ, ಪುಟ್ಟಮನ್ನಿ, ಗೌರಿ, ಭಾಗ್ಯ, ಅರ್ಪಿತ ಸಂದೀಪ್, ಶಕುಂತಲಾ, ಕವಿತಾ ವೀರಭದ್ರ, ದರ್ಶಿನಿ ಎಸ್ ಗೌಡ ಅವರುಗಳಿಗೆ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಲಿಂಗರಾಜು ಬಹುಮಾನ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಜನರಲ್ಲಿ ಭಕ್ತಿ ಕಡಿಮೆಯಾಗುತ್ತಿದೆ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಲು ಜನ ಹಿಂದೆಮುಂದೆ ನೋಡುವ ಸ್ಥಿತಿಯಿದೆ ಎಂದು ಅಭಿಪ್ರಾಯ ಪಟ್ಟರು.

ನಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯಗಳನ್ನು ಯುವ ಪೀಳಿಗೆ ಮರೆಯಬಾರದು. ಹಬ್ಬ ಹರಿದಿನಗಳನ್ನು ಸರ್ವ ಧರ್ಮದವರು ಜತೆಯಾಗಿ ಸೇರಿ ಆಚರಿಸಬೇಕು,ಶ್ರದ್ಧಾ ಭಕ್ತಿಯಿಂದ ಹಬ್ಬಗಳನ್ನು ಆಚರಿಸುವದರಿಂದ ಜನರಲ್ಲಿ ಸಾಮರಸ್ಯ ಹೆಚ್ಚುತ್ತದೆ,ಜನರ ಒಗ್ಗೂಡುವಿಕೆಯಿಂದ ದೇಶವು ಪ್ರಗತಿ ಕಾಣುತ್ತದೆ ಎಂದು ಲಿಂಗರಾಜು ತಿಳಿಸಿದರು.

ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷೆ ಹೇಮನಂದೀಶ್ ಮಾತನಾಡಿ, ರಂಗ ಅಂದರೆ ವಿಷ್ಣು,ರಂಗವಲ್ಲಿ ಮೂಲಕ ವಿಷ್ಣುವನ್ನು ಬರಮಾಡಿಕೊಳ್ಳುವುದೇ ರಂಗೋಲಿ ಎಂದು ತಿಳಿಸಿದರು.

ಅನ್ನಪೂರ್ಣ ಐ ಆಸ್ಪತ್ರೆಯ ಎಂ ಡಿ ಅಶ್ವತ್ ಕುಮಾರ್ ಮಾತನಾಡಿ,ಹೆಣ್ಣಿಗೆ ಹಣೆಯಲ್ಲಿ ಕುಂಕುಮ ಸಿಂಧೂರ ಎಷ್ಟು ಮುಖ್ಯವೋ ಅದೇ ರೀತಿ ಮನೆಗೆ ರಂಗೋಲಿಯೂ ಅಷ್ಟೇ ಮುಖ್ಯ ರಂಗೋಲಿ ನಮ್ಮ ಭಾರತೀಯ ಸಂಪ್ರದಾಯದ ಪ್ರತೀಕ ಎಂದು ನುಡಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷೆ ಪುಷ್ಪ, ಸಮೃದ್ಧಿ ಟ್ರಸ್ಟ್, ಅಧ್ಯಕ್ಷೆ ಸಹನಗೌಡ, ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಮತ್ತಿತರರು ಹಾಜರಿದ್ದರು.