(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಹದಿನಾರನೇ ಬಜೆಟ್ ಸಮತೋಲನ ಬಜೆಟ್ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿರವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಸಮುದಾಯವರ ಎಲ್ಲಾ ವರ್ಗದವರ ಹಿತ ಕಾಯುವಂತ ಬಜೆಟ್ ಆಗಿದ್ದು,ಬಜೆಟ್ ನಲ್ಲಿ ಎಲ್ಲರಿಗೂ ನ್ಯಾಯ ಸಮ್ಮತವಾದಂತ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನ ಟಗರಪುರ ಹಾಗೂ ಕುಂತೂರು ಗ್ರಾ. ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ವೇಳೆ ಅವರು ಮಾತನಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಹೇಳುವ ಹಾಗೆ ಸಿದ್ದರಾಮಯ್ಯರವರು ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯಬಹುದಿತ್ತು, ರಾಜ್ಯದ ಜನತೆಗೆ ಭಾಗ್ಯಗಳ ಭಾಗ್ಯ ಕೊಟ್ಟ ಸಿದ್ದರಾಮಯ್ಯ ಆ ರೀತಿ ದೇಶದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಅವರಿಗೆ ಹಿಂದಿ, ಉರ್ದು ಭಾಷೆಗಳು ಬರುತ್ತಿದ್ದರೆ ದೇಶದ ಇತರ ರಾಜ್ಯದವರು ಅವರನ್ನು ಕರೆದು ಬಜೆಟ್ ಬಗ್ಗೆ ಚರ್ಚಿಸುತ್ತಿದ್ದರು ಎಂದು ತಿಳಿಸಿದರು.
ವಿರೋಧ ಪಕ್ಷದವರು ನಾನಾ ರೀತಿಯಲ್ಲಿ ವ್ಯಾಖ್ಯಾನ ಮಾಡುತಿದ್ದಾರೆ.ವಿರೋಧ ಮಾಡುವವರ ಶ್ರೀಮತಿಯವರು ಗ್ಯಾರೆಂಟಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪಕ್ಷಾತೀತವಾಗಿ ಧರ್ಮಾತೀತವಾಗಿ ಎಲ್ಲರಿಗೂ ಸಿದ್ದರಾಮಯ್ಯ ಸೇವೆ ಕಲ್ಪಿಸಿಕೊಟ್ಟಿದ್ದಾರೆ. ವಿರೋಧ ಪಕ್ಷದ ಕೆಲವರು ಗ್ಯಾರೆಂಟಿ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ ಆದರೆ ಕೆಲವರು ಅದನ್ನು ಟೀಕೆ ಮಾಡುತ್ತಿದ್ದಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಯಾವುದೇ ಸರ್ಕಾರವಿರಲಿ ಯಾವುದೇ ಪಕ್ಷವಿರಲಿ ಜನಪರ ಕೆಲಸ ಮಾಡುವುದನ್ನು ಒಪ್ಪಿಕೊಳ್ಳುವುದು ಒಳ್ಳೆಯ ಗುಣ ಎಂದು ಅಭಿಪ್ರಾಯ ಪಟ್ಟರು.
ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂಗಳನ್ನು ಕಾಯ್ದಿರಿಸಿ ಉಳಿದ ಅಭಿವೃದ್ಧಿ ಯೋಜನೆಗಳಿಗೂ ಅನುದಾನ ನೀಡಲಾಗುತ್ತಿದೆ. ಇಂದು ಯಾವುದೇ ಅನುದಾನ ಕೊಡದಿದ್ದರೆ ನಾನು ಭೂಮಿ ಪೂಜೆ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಕೃಷ್ಣಮೂರ್ತಿ ಪ್ರಶ್ನಿಸಿದರು.
ಒಬ್ಬರ ಕಾಲದಲ್ಲಿ ಭೂಮಿ ಪೂಜೆ ಯಾಗಿದ್ದನ್ನು ಅವರ ಕಾಲದಲ್ಲಿ ಉದ್ಘಾಟನೆ ಮಾಡಲು ಸಾಧ್ಯವಾಗದಿದ್ದರೆ ಮುಂದಿನ ಶಾಸಕ ಉದ್ಘಾಟನೆ ಮಾಡುವುದು ಸಹಜ ಆದರೆ ಯಾರೊ ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿರುವುದನ್ನು ನೋಡಿದೆ. ಯಾವ ಯೋಜನೆಯಲ್ಲಿ ಅವರ ಸರ್ಕಾರದ ಯೋಜನೆಗಳು ಮುಂಜೂರು, ಜಾರಿ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ ಎಂದು ಮಾಜಿ ಶಾಸಕರಿಗೆ ಸವಾಲು ಹಾಕಿದರು.

ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗ್ಗೆ ಕೇಂದ್ರ ಸರ್ಕಾರದೊಡನೆ ಲೋಕಸಭೆಯಲ್ಲಿ ಹೋರಾಟ ಮಾಡದೇ ಹೋಗಿದ್ದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅಷ್ಟೊಂದು ಅನುದಾನ ತರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಜಿಲ್ಲೆಯಲ್ಲಿ ಅರೆ ನೀರಾವರಿಯಿದ್ದು ಪೂರ್ಣ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಶಾಸಕರಾದಿಯಾಗಿ ನಾನು ಕೂಡ ಲಿಖಿತ ಮನವಿ ಸಲ್ಲಿಸಿದ್ದೇನೆ, ಈ ಎಲ್ಲಾ ಯೋಜನೆಗಳಿಗೆ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು ಅನುಮೋದನೆ ನೀಡಲಿದ್ದಾರೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಕಾರ್ಖಾನೆಗಳನ್ನು, ರೇಷ್ಮೆ ಮಾರುಕಟ್ಟೆಗಳನ್ನು ಪುನಶ್ಚೇತನ ಗೊಳಿಸಿ ರೈತರಿಗೆ ರೇಷ್ಮೆ ಕುರಿತು ತರಬೇತಿ ಕೊಡುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಿದ್ದು ಜಿಲ್ಲೆಯಲ್ಲಿ ರೇಷ್ಮೆಯ ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವುದಾಗಿ ತಿಳಿಸಿದರು
ಯಳಂದೂರಿನಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಈ ಆಸ್ಪತ್ರೆ ಮಂಜೂರಾತಿಗೆ ಸಾಕಷ್ಟು ಶ್ರಮವಹಿಸಬೇಕಾಯಿತು,ಏಕೆಂದರೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಸೀಮ್ಸ್ ಆಸ್ಪತ್ರೆ ಈ ಎರಡು ಆಸ್ಪತ್ರೆಗಳ ನಡುವೆ ಕೇವಲ 20 ಕಿ.ಮೀ ಅಂತರದಲ್ಲಿ 100 ಹಾಸಿಗೆ ಉಳ್ಳ ಆಸ್ಪತ್ರೆ ಮಂಜೂರು ಮಾಡಲು ಸಾಧ್ಯವಿಲ್ಲ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಮನವೊಲಿಸಿ ಕ್ಷೇತ್ರಕ್ಕೆ 100 ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಆಲಹಳ್ಳಿ ಗ್ರಾಮದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ 2023-24ನೇ ಸಾಲಿನ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶುಧ್ಧ ಕುಡಿಯುವ ನೀರಿನ ಘಟಕವನ್ನು ಕೃಷ್ಣಮೂರ್ತಿ ಉದ್ಘಾಟಿಸಿದರು.
ನಂತರ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಬಸವ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿದರು.
ಮಲ್ಲಹಳ್ಲಿ ಮಾಳ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೆಸ್ತೂರು ರಸ್ತೆಯ ಹುಣಸೆಕಟ್ಟೆಗೆ ರಸ್ತೆ ನಿರ್ಮಾಣ, ಕುಂತೂರುಮೋಳೆ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಭಗೀರಥ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ, ಚಿಲಕವಾಡಿ ಗ್ರಾಮದಲ್ಲಿರುವ ಪಾಲಿಟೆಕ್ನಿಕ್ ಕಾಲೇಜ್ ರಸ್ತೆ 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಲಹಳ್ಳಿ ಮಠದ ಬಸಪ್ಪ ಸ್ವಾಮೀಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮಾಜಿ ತಾಪಂ ಸದಸ್ಯ ಚೆಲುವರಾಜು, ಲ್ಯಾಂಡ್ ಆರ್ಮಿ ಎ.ಇ.ಇ. ಚಿಕ್ಕಲಿಂಗಯ್ಯ, ನಿರ್ಮಿತಿ ಕೇಂದ್ರದ ಜೆ.ಇ. ಪ್ರತಾಪ್, ಟಗರುಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ,ಪಿ.ಡಿ.ಒ ಮಲ್ಲೇಶ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕುಂತೂರು ಮೂಳೆ ರಾಜೇಂದ್ರ, ಮಾಜಿ ತಾಪಂ ಸದಸ್ಯ ಚೆಲುವರಾಜು, ಗೊಬ್ಬಳಿಪುರ ರಾಚಯ್ಯ, ಗ್ರಾಮದ ಮುಖಂಡರಾದ ಗೌಡಿಕೆ ಎ.ಬಿ. ಬಸವಣ್ಣ, ವೃಷಭೆಂದ್ರಪ್ಪ, ಎ.ಬಿ.ಜಗದೀಶ್ ಮತ್ತಿತರರು ಹಾಜರಿದ್ದರು.