ಮೈಸೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಕೆಲವರು ಜಾತಿ ನಿಂದನೆ ಮಾಡಿ ಕುಡಿಯುವ ನೀರಿಗೂ ತೊಂದರೆ ಕೊಡುತ್ತಿರುವ ಅಮಾನವೀಯ ಘಟನೆ ನಡೆದಿದೆ,ಆದರೆ ಪುಂಡರನ್ನು ಕೇಳುವವರೇ ಇಲ್ಲದಂತಾಗಿದೆ.
ವರುಣಾ ಕ್ಷೇತ್ರ,ನಂಜನಗೂಡು ತಾಲೂಕು,ಚಿಕ್ಕಯ್ಯನ ಛತ್ರ ಬಿದರಗೂಡು ಗ್ರಾಮದಲ್ಲಿ ಮಂಜು ಮತ್ತು ಅವರ ತಾಯಿ,ರವಿ ಮತ್ತಿತರರು ಹೀಗೆ ದೌರ್ಜನ್ಯ ನಡೆಸಿದ್ದಾರೆ ಎಂದು ಲಕ್ಷ್ಮಿ ಎಂಬವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಜು ಎಂಬಾತ ಜಾತಿ ನಿಂದನೆ ಮಾಡಿ ಕುಡಿಯುವ ನೀರಿನ ನಲ್ಲಿಯ ಪೈಪನ್ನು ಕಿತ್ತು ಹಾಕಿ ಧಮ್ಕಿ ಹಾಕಿದ್ದಾನೆ.

ಗ್ರಾಮಸ್ಥರು ಮತ್ತು ಪಿಡಿಒ ಎರಡು ಬಾರಿ ಅಳತೆ ಮಾಡಿ ಹೋಗಿದ್ದಾರೆ,ಅಲ್ಲದೆ ಮಹಿಳೆಯರಿಗೆ ತೊಂದರೆ ಕೊಡಬೇಡ ಎಂದು ಬುದ್ದಿ ಹೇಳಿದರೂ ಕೂಡಾ ಅವರ ಮಾತನ್ನು ಲೆಕ್ಕಿಸಿಲ್ಲ. ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೂ ದೌರ್ಜನ್ಯ ಮಾಡಿರುವ ಮಂಜು ಮತ್ತು ಅವರ ತಾಯಿ ಕುಡಿಯೋಕೆ ನೀರು ಬರದಂತೆ ಮಾಡಿ ಒಂದುವಾರ ಆಗಿದೆ ಎಂದು ಲಕ್ಷ್ಮೀ ಅಲವತ್ತುಕೊಂಡಿದ್ದಾರೆ.

ಈ ಘಟನೆ ನಡೆದಿರುವುದು ಮಾರ್ಚ್ ಒಂದನೆ ತಾರೀಖು,ಹುಲ್ಲಹಳ್ಳಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಾದರೂ ಇಲ್ಲಿಯ ತನಕ ನ್ಯಾಯ ಸಿಕ್ಕಿಲ್ಲ,ನೀರೂ ಕೂಡಾ ಬಂದಿಲ್ಲ ನಮಗೆ ನ್ಯಾಯ ಕೊಡಿಸಬೇಕೆಂದು ನೊಂದ ಮಹಿಳೆಯರು ಪರಿ,ಪರಿಯಾಗಿ ಬೇಡಿಕೊಂಡಿದ್ದಾರೆ.
ಸಿಎಂ ಕ್ಷೇತ್ರದಲ್ಲೇ ಹೀಗಾದರೆ ಬೇರೆ ಕಡೆ ಹೇಗಿರಬೇಡ.ಈಗಲಾದರೂ ದೌರ್ಜನ್ಯ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವ ಅಗತ್ಯವಿದೆ.ಅಮಾಯಕರಿಗೆ ನ್ಯಾಯ ಕೊಡಿಸಬೇಕಿದೆ.
ನೀರಿಲ್ಲದೆ ಎಷ್ಟು ದಿನ ಹಾಗೇ ಇರಲು ಸಾಧ್ಯ?ತಕ್ಷಣ ಪೊಲೀಸರು ಎಚ್ಚೆತ್ತುಕೊಳ್ಳಲಿ.