ಹಾಲು ಒಕ್ಕೂಟಗಳ ದರ ಏರಿಕೆ ಬೇಡಿಕೆಗೆ ಮಣಿಯದ ಸಿಎಂ:ಸಂಪುಟ‌ ಸಭೆಯಲ್ಲಿ ಚರ್ಚಿಸಿ ನಿರ್ಧಾರ

Spread the love

ಬೆಂಗಳೂರು: ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕಾವೇರಿಯಲ್ಲಿ ನಡೆಸಿದ ಸಭೆಯ ನಂತರ ಸಿಎಂ ಮಾತನಾಡಿದರು.

ಒಕ್ಕೂಟಗಳ ದರ ಏರಿಕೆ ಬೇಡಿಕೆಗಳನ್ನು ಆಲಿಸಿದರೂ ಮಣಿಯದೆ ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ, ಹಾಲಿನದರ ಹೆಚ್ಚಳ ಮಾಡಿದರೆ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗಬೇಕು ಎಂಬುವುದು ಸರ್ಕಾರದ ದೃಢ ನಿಲುವು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು, ಪಾರದರ್ಶಕತೆಯನ್ನು ಪಾಲಿಸಬೇಕು, ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು,ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ ಎಂದು ಸಿಎಂ ಕಡಕ್ ಆಗಿ ನುಡಿದರು.