ಮೈಸೂರು: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು. ಕಚೇರಿಯಲ್ಲಿದ್ದು ಜನರ ಸಮಸ್ಯೆ ಆಲಿಸಬೇಕು ಎಂದು ಕೆಡಿಪಿ ಸಭೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ನಗರದಲ್ಲಿ ಮಾತನಾಡಿದ ಸಿಎಂ, ಮೈಸೂರಲ್ಲಿ ನಿನ್ನೆ ಕೆಡಿಪಿ ಸಭೆ ಮಾಡಿದ್ದೇನೆ. ಕಳೆದ ಆರು ತಿಂಗಳ ಬಳಿಕ ಸಭೆ ಮಾಡಲಾಗಿದೆ,ನಿರಂತರ 10 ಗಂಟೆಗಳ ಕಾಲ ಅಧಿಕಾರಿಗಳ ಜೊತೆ ಸಭೆ ನಡೆಯಿತು. ನಾನು ಬೆಂಗಳೂರಲ್ಲಿರಲಿ, ಎಲ್ಲೇ ಇರಲಿ ಸಮಸ್ಯೆ ಹೊತ್ತು ನೂರಾರು ಜನ ಬರುತ್ತಾರೆ. ಕಾರ್ಯಕ್ರಮಕ್ಕೆ ಹೋಗುವುದಿದ್ದರೆ ದಿನವಿಡಿ ಕಾದಿರುತ್ತಾರೆ. ರಾತ್ರಿ 9 ಗಂಟೆಗೆ ಬಂದರೂ ಕಾಯುತ್ತಿರುತ್ತಾರೆ ಎಂದು ವಿಷಾದಿಸಿದರು.
ಬಹುತೇಕ ಜನರ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥವಾಗುತ್ತವೆ. ಹೆಚ್ಚಾಗಿ ಕೃಷಿ ಇಲಾಖೆಗೆ ಸಂಬಂಧಿಸಿದ್ದೇ ಇರುತ್ತದೆ. ಪಹಣಿ, ಪೋಡಿ ಸೇರಿ ಹಲವು ವಿಚಾರಗಳು ಇರುತ್ತದೆ. ವೈಯಕ್ತಿಕ ಕಾರಣ ಇಟ್ಟುಕೊಂಡು ಬರುವುದು ಕಡಿಮೆ. ಪೊಲೀಸ್ ಇಲಾಖೆಯ ಹಲವು ಸಮಸ್ಯೆಗಳು ಜನರನ್ನ ಕಾಡುತ್ತವೆ. ಈ ಕಾರಣಕ್ಕೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ.
ಅಧಿಕಾರಿಗಳು ಜನರನ್ನ ಭೇಟಿ ಮಾಡಬೇಕು. ಕಚೇರಿಯಲ್ಲಿದ್ದು ಜನರ ಸಮಸ್ಯೆ ಆಲಿಸಬೇಕು. ಕಾನೂನು ರೀತಿ ಅಗತ್ಯಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಜನರನ್ನ ಅಲಿಸುವುದು ದೊಡ್ಡ ಅಪರಾಧ. ಜನರೇ ಪ್ರಜಾಪ್ರಭುತ್ವದಲ್ಲಿ ಪ್ರಭುಗಳು. ಜನರಿಗೆ ಈ ಕುರಿತು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದ ಸಿಎಂ ತಿಳಿಸಿದರು.
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು. ಕೆಲವರು ಕೇಂದ್ರ ಸ್ಥಾನದಲ್ಲಿ ವಾಸ ಮಾಡುತ್ತಿಲ್ಲ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಹೋಗುತ್ತಾರೆ. ಇದು ಸರಿಯಾದ ಪದ್ಧತಿಯಲ್ಲ ಎಂದು
ಗ್ರಾಪಂ ಪಿಡಿಒ,ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು.
