ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದ ಮತ್ತೊಂದು ಕೇಸು ದಾಖಲು

Spread the love

ಮೈಸೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ದ ಮತ್ತೊಂದು ಕೇಸ್ ದಾಖಲಾಗಿದ್ದು,ಮುಡಾ ಹಗರಣ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದಂತಾಗಿದೆ.

ಪ್ರಕರಣದ ಎ4 ಆರೋಪಿ ಜೆ.ದೇವರಾಜು ಅವರ ಅಣ್ಣ ಮೈಲಾರಯ್ಯ ಅವರ ಮಗಳು ಜಮುನಾ ಎಂಬುವರು ಸಿಎಂ ಪತ್ನಿ ಬಿ.ಎನ್.ಪಾವರ್ತಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಕೆಸರೆ ಗ್ರಾಮದ ಸರ್ವೆ ನಂಬರ್ 464 ರ ಜಮೀನಿನಲ್ಲಿ ತಮಗೂ ಭಾಗ ಬರಬೇಕು, ಪಿತ್ರಾರ್ಜಿತ ಆಸ್ತಿಯಲ್ಲಿ ತನಗೂ ಪಾಲು ಕೊಡಿ ಎಂದು ಜಮುನಾ ಅವರು ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ದ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಸರ್ವೆ ನಂ.464ರ 3.16 ಎಕರೆ ಭೂಮಿ ಇದಾಗಿದ್ದು, ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಕೂಡ ದೂರು ನೀಡಿದ್ದಾರೆ.

ಸ್ವಂತ ದೊಡ್ಡಪ್ಪ ದೇವರಾಜು ಹಾಗು ಕುಟುಂಬದವರನ್ನು ಎದುರಾಳಿ ಮಾಡಿದ್ದು, ಮೈಸೂರು ಮುಡಾ ಕಮೀಷನರ್ ಹಾಗೂ ಜಿಲ್ಲಾಧಿಕಾರಿಯನ್ನೂ ಪಾರ್ಟಿ ಮಾಡಿದ್ದಾರೆ.