ಪ್ರೀತಿ, ಅನುಕಂಪವೇ ಎಲ್ಲ ಧರ್ಮಗಳ ತಿರುಳು- ಸಿದ್ದರಾಮಯ್ಯ

ಬೆಳಗಾವಿ: ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ,ಪ್ರೀತಿ ಮತ್ತು ಅನುಕಂಪಗಳೇ ಎಲ್ಲ ಧರ್ಮಗಳ ತಿರುಳು ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಧರ್ಮಪ್ರಾಂತ್ಯಕ್ಕೆ ಭೇಟಿ ನೀಡಿ ಆರ್ಚ್ ಬಿಷಪ್ ಡೆರೆಕ್ ಫೆರ್ನಾಂಡೀಸ್ ಅವರಿಂದ ಗೌರವ ಸ್ವೀಕರಿಸಿ ಸಿಎಂ ಮಾತನಾಡಿದರು.

ನಮ್ಮ ದೇಶದಲ್ಲಿ ಹಲವು ಜಾತಿಧರ್ಮಗಳ ಜನರಿದ್ದರೂ, ಎಲ್ಲರೂ ಐಕ್ಯತೆ ಹಾಗೂ ಸಾಮರಸ್ಯದಿಂದ ಬಾಳುವ ಅವಶ್ಯಕತೆಯಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮಾನವೀಯ ಸಮಾಜವನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ನಮ್ಮ ಸಂವಿಧಾನ ಹೆಚ್ಚು ಒತ್ತು ನೀಡಿದ್ದು, ಶಿಕ್ಷಣ ವ್ಯವಸ್ಥೆ ಅದಕ್ಕೆ ಪೂರಕವಾಗಿರಬೇಕು ಎಂದು ಸಿಎಂ‌‌ ಸಲಹೆ ನೀಡಿದರು.

ಸಮಾನ ಅವಕಾಶಗಳನ್ನು ನೀಡುವ ಸಮಾಜವಾದವನ್ನು ಪ್ರತಿಪಾದಿಸುವ ಸಮಾಜ ನಿರ್ಮಿಸುವ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಇದಕ್ಕೆ ಪೂರಕವಾಗಿ ಕ್ರಿಶ್ಚಿಯನ್ ಸಮುದಾಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ದ್ವೇಷ ಬಿತ್ತುವ ಕೆಲಸದಲ್ಲಿ ನಿರತವಾಗಿದೆ. ಎಲ್ಲ ಧರ್ಮಗಳ ತಿರುಳು , ಪ್ರೀತಿ ಮತ್ತು ಅನುಕಂಪ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಎಲ್ಲ ಕ್ರಿಶ್ಚಿಯನ್ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದು ಸಿದ್ದರಾಮಯ್ಯ ತಿಳಿಸಿದರು.

ಆರ್ಚ್ ಬಿಷಪ್ ಡೆರಿಕ್ ಫೆರ್ನಾಂಡೀಸ್, ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ವಿಧಾನ‌ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಸೇರಿದಯ ಹಲವು ಗಣ್ಯರು ಉಪಸ್ಥಿತರಿದ್ದರು.‌