ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ಬದ್ಧತೆ ಇದೆ: ಸಿಎಂ

Spread the love

ಬೆಂಗಳೂರು: ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದ್ದು, ಪೂಜ್ಯರ ಬೇಡಿಕೆಗಳಲ್ಲಿ ಸಾಧ್ಯ ಇರುವುದನ್ನು ಹಂತ ಹಂತವಾಗಿ ಈಡೇರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.‌

ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರು, ಸಮಾಜದ ಮುಖಂಡರ ಸಭೆಯಲ್ಲಿ ಸಿಎಂ ಮಾತನಾಡಿದರು.

ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ. ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಿದ್ದು ನಮ್ಮದೇ ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ಬಸವಣ್ಣನವರ ವಿಚಾರ ಮತ್ತು ಹೋರಾಟ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪೂರಕ. ಜಾತಿವಾದಿ ಪಟ್ಟಭದ್ರರಿಗೆ ಬಸವಣ್ಣನವರ ವಿಚಾರಗಳು ಹಿಡಿಸುವುದಿಲ್ಲ,
ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ,ಹಾಗಾಗಿ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.

ಜಾತ್ಯತೀತ, ಸಮ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರ ಹೋರಾಟ ಪೂರಕ,ಬಸವಣ್ಣನವರ ವಿಚಾರಗಳೇ ಅಂಬೇಡ್ಕರ್ ವಿಚಾರಗಳಾಗಿದ್ದು ಇವೆಲ್ಲವೂ ಸಂವಿಧಾನದಲ್ಲಿ ಅಡಕವಾಗಿವೆ ಎಂದು ಸಿಎಂ ಹೇಳಿದರು.

ಗೋರುಚ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿದ್ದು ನಾವು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ವೇದಿಕೆ. ಯಾರ ಒತ್ತಾಯವೂ ಇಲ್ಲದ ವೇಳೆಯಲ್ಲೇ ನಮ್ಮ ಸರ್ಕಾರ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿತ್ತು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಸಮರ್ಥಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಸವಣ್ಣನ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸಬೇಕು. ಜೊತೆಗೆ, ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಕ್ಷರಧಾಮದ ಮಾದರಿಯಲ್ಲಿ ಬೃಹತ್ ‘ಶರಣ ದರ್ಶನ’ ಕೇಂದ್ರ ಸ್ಥಾಪಿಸಿ, ಅಲ್ಲಿ, ಉದ್ಯಾನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂಬ ಬೇಡಿಕೆಯನ್ನು ಬಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರು ಎಲ್ಲರ ಪರವಾಗಿ ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‘ಬಸವಭವನ’ ನಿರ್ಮಿಸಿ, ಅಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು.

ಮುಂದಿನ ಐದು ವರ್ಷಗಳಲ್ಲಿ 500 ಕೋಟಿ ಅನುದಾನ ಒದಗಿಸುವ ಮೂಲಕ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಮುಂಬರುವ ಪೀಳಿಗೆಗಳಿಗೆ ಪರಿಚಯಿಸುವುದಕ್ಕೆ ಸಂಬಂಧಿಸಿದ ಈ ಕಾರ್ಯಯೋಜನೆಗಳಿಗೆ ಚಾಲನೆ ನೀಡಿ, ಇತಿಹಾಸ ಸದಾ ನೆನಪಿಸಿಕೊಳ್ಳುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಸ್ವಾಮೀಜಿಗಳು ಕೋರಿದರು.