ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಮತ್ತೆ ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದರೂ ಕೇಳುವವರೇ ಇಲ್ಲದಂತಾಗಿದೆ.
ಕೇವಲ 14 ಸಾವಿರಕ್ಕೆ ಹೆಣ್ಣುಮಗುವನ್ನ ಮಾರಾಟ ಮಾಡಲಾಗಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.
ಮಗು ಮಾರಾಟ ಬೆಳಕಿಗೆ ಬಂದರೂ ಪೊಲೀಸರು ಪ್ರಕರಣ ದಾಖಲಿಸಿಯೇ ಇಲ್ಲ. ಸಿಎಂ ತವರು ಜಿಲ್ಲೆಯಲ್ಲೇ ಇಂತಹ ಪ್ರಕರಣ ನಡೆದರೂ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ.
ನಂಜನಗೂಡಿನ ನೀಲಕಂಠನಗರದ ಅನಿಲ್ ಕುಮಾರ್ ಹಾಗೂ ಸೌಮ್ಯ ಎಂಬ ದಂಪತಿಗೆ ಸೇರಿದ ಮಗುವನ್ನ ಮಾರಾಟ ಮಾಡಲಾಗಿದೆ ಎಂಬ ಆರೋಪಿಸಲಾಗಿದೆ.
ದಂಪತಿಗೆ ಹುಟ್ಟಿದ ಮೂರು ಮಕ್ಕಳೂ ಹೆಣ್ಣಾದ ಕಾರಣ ಮೂರನೇ ಮಗು ಅಮೂಲ್ಯಳನ್ನ ಮಾರಾಟ ಮಾಡಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದಾರೆ.
ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.
ಮಗು ಮಾರಾಟ ಆಗಿದೆ ಎಂಬ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಲಾವಣ್ಯ ಎಂಬುವರಿಗೆ ದೂರು ಬಂದಿದೆ.ಕೂಡಲೇ ಲಾವಣ್ಯ ಅವರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ನಂತರ ಸ್ಥಳೀಯ ಮುಖಂಡರಾದ ಅನಂತ್ ರವರಿಗೆ ತಿಳಿಸಿದ್ದಾರೆ.ಅನಂತ್ ಅವರು ಮಗುವನ್ನ ಖರೀದಿಸಿದವರನ್ನ ಸಂಪರ್ಕಿಸಿದಾಗ 14 ಸಾವಿರಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ನಮಗೆ ನಮ್ಮ ಹಣ ಕೊಟ್ಟರೆ ಮಗು ಕೊಡುವುದಾಗಿ ತಿಳಿಸಿದ್ದಾರೆ.ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ಹೇಳದಾಗ ವಾಪಸ್ ತಂದು ಕೊಟ್ಟಿದ್ದಾರೆ.
ಮಗು ವಾಪಸ್ ಬಂದ ನಂತರ ಪೊಲೀಸರು ಬಂದು ಮಗುವನ್ನ ವಶಕ್ಕೆ ಪಡೆದಿದ್ದಾರೆ.ಈ ವೇಳೆ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಗುವನ್ನ ತಮ್ಮ ವಶಕ್ಕೆ ಪಡೆದಿದ್ದಾರೆ.
ಆದರೆ ಇದುವರೆಗೆ ಯಾರ ವಿರುದ್ದವೂ ಪ್ರಕರಣ ದಾಖಲಿಸಿಲ್ಲ.ಮಗುವನ್ನ ಮಾರಾಟ ಮಾಡಿದವರಾಗಲಿ,ಮಧ್ಯವರ್ತಿಯಾಗಲಿ ಅಥವಾ ಖರೀದಿಸದವರನ್ನಾಗಲಿ ವಶಕ್ಕೆ ಪಡೆದು ವಿಚಾರಣೆ ಮಾಡಲಿಲ್ಲ ಹಾಗಾಗಿ ಸಹಜವಾಗಿ ಅನುಮಾನಗಳು ಕಾಡುತ್ತಿವೆ.